ವಿಜಯಪುರ:ತನ್ನ ವಿರುದ್ಧ ದೂರು ನೀಡಿರುವ ಮಂಡ್ಯ ಮಾನವ ಹಕ್ಕುಗಳ ಸೇವಾ ಸಮಿತಿ ಜಿಲ್ಲಾಧ್ಯಕ್ಷೆ ಕೆ.ಎಚ್. ಇಂದಿರಾ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲು ಚಿಂತಿಸಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ದೂರವಾಣಿ ಕರೆ ಮಾಡಿ ಇಂದಿರಾ ಎನ್ನುವವರು ತಮ್ಮ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ನಮಗೆ ನೋಟಿಸ್ ಬಂದಿದೆ. ನಾಳೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಾಟ್ಸಪ್ ಮೂಲಕ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಆದರೆ ನಿರಂತರ ಕಾರ್ಯ ಇರುವ ಕಾರಣ ಠಾಣೆಗೆ ಹಾಜರಾಗುವುದು ಕಷ್ಟಕರವಾಗಿದೆ ಎಂದರು.
ಇತ್ತೀಚಿಗೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಕೆಲವರ ಬಳಿ ಸಿಡಿ ಇರಬಹುದು ಎಂದಷ್ಟೇ ಹೇಳಿದ್ದೆನೆ ಹೊರತು, ನನ್ನ ಬಳಿ ಸಿಡಿಗಳಿವೆ ಎಂದು ಹೇಳಿಲ್ಲ. ಇಂದಿರಾ ಅವರು ಮಂಡ್ಯದಲ್ಲಿ ದೂರು ನೀಡಬಹುದಿತ್ತು. ಅಲ್ಲಿ ಬಿಟ್ಟು ಬೆಂಗಳೂರಿನ ಕಬ್ಬನ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಏಕೆ ದೂರು ದಾಖಲಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಅವರ ವಿರುದ್ಧ ನಮ್ಮ ವಕೀಲರ ಮೂಲಕ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು. ಎರಡು ದಿನದೊಳಗೆ ಅವರಿಗೆ ನೋಟಿಸ್ ಜಾರಿಯಾಗಬಹುದು ಎಂದು ಹೇಳಿದರು.