ಮುದ್ದೇಬಿಹಾಳ(ವಿಜಯಪುರ):ಪಟ್ಟಣದ ಮಹಿಬೂಬ ನಗರದ 20ನೇ ವಾರ್ಡ್ನ ಗಾರ್ಡನ್ ಜಾಗ ಖಾಲಿಯಿದೆ. ಈ ಜಾಗದಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಗಾರ್ಡನ್ ಜಾಗದಲ್ಲಿ ಮಳೆ ನೀರು ಸಂಗ್ರಹ.. ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಈ ಕುರಿತು ಪ್ರತಿಕ್ರಯಿಸಿರುವ 20ನೇ ವಾರ್ಡ್ ನಿವಾಸಿ ಅಬ್ದುಲ್ ಸಲಾಂ ಮುಲ್ಲಾ, ಇತ್ತೀಚೆಗೆ ಪಟ್ಟಣದಲ್ಲಿರುವ 60ಕ್ಕೂ ಹೆಚ್ಚು ಗಾರ್ಡನ್ ಜಾಗಗಳನ್ನು ಅಂದಾಜು 12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೆಬಿಜೆಎನ್‌ಎಲ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರಿಗೆ ಮಾಹಿತಿ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ವಾರ್ಡ್ ಸದಸ್ಯ ರಿಯಾಜ್ ಢವಳಗಿ ನನಗಿದು ಸಂಬಂಧಿಸಿದ್ದಲ್ಲ ಎಂಬಂತೆ ದೂರವೇ ಓಡಾಡುತ್ತಿದ್ದಾರೆ. ಆದರೆ, ನಿವಾಸಿಗಳು ಮಾತ್ರ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು. ಮುರ್ತುಜ್ ನಾಗರಾಳ ಎಂಬುವರು ಮಾತನಾಡಿ, ಕೊಳಚೆ ನೀರು ನಿಂತು ಮಕ್ಕಳಿಗೆ ಮಲೇರಿಯಾ, ಡೆಂಘೀ ಜ್ವರದಂತಹ ಮಾರಕ ರೋಗಗಳು ಬರುತ್ತಿವೆ. ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ಗಾರ್ಡನ್ ಜಾಗಗಳು ಅತಿಕ್ರಮಣವಾಗಿವೆ. ಕೆಲ ಗಾರ್ಡನ್ ಜಾಗಗಳಲ್ಲಿ ತಗ್ಗು ಪ್ರದೇಶವಿದ್ದು, ಸುತ್ತಮುತ್ತಲಿನ ಮನೆಗಳಲ್ಲಿನ ಕೊಳಚೆ ನೀರು ಅಲ್ಲಿ ಸಂಗ್ರಹವಾಗುವಂತೆ ಬಿಡುತ್ತಿದ್ದಾರೆ ಎಂದರು.