ಮುದ್ದೇಬಿಹಾಳ :ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ 21 ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಮನೆ ಬಿದ್ದಿರುವ ಕುರಿತಾದ ಮಾಹಿತಿಯನ್ನು ತಾಲೂಕಾಡಳಿತ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿದೆ. ಈ ಕುರಿತು ಮಾಹಿತಿ ನೀಡಿರುವ ತಹಶೀಲ್ದಾರ್ ಜಿ ಎಸ್ ಮಳಗಿ, ಪ್ರಕೃತಿ ವಿಕೋಪ ವಿಭಾಗದ ಸಿಬ್ಬಂದಿ ಮಹಾಂತೇಶ ಮಾಗಿ ಅವರು ತಾಲೂಕಿನಲ್ಲಿ ಒಟ್ಟು 21 ಮನೆ ಕುಸಿದಿದ್ದು, ಒಂದು ಮೇಕೆ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಜಕ್ಕೇರಾಳ ಗ್ರಾಮದ ನಿಂಗಪ್ಪ ಇಂಗಳಗೇರಿ ಎಂಬುವರ ಮನೆ ಗೋಡೆ ಕುಸಿದು ಮನೆಯ ಹಿಂಭಾಗದಲ್ಲಿ ಕಟ್ಟಿದ್ದ ಮೇಕೆಯೊಂದು ಸಾವನ್ನಪ್ಪಿದೆ. ಇನ್ನುಳಿದ ಮೇಕೆ ಮರಿಗಳನ್ನು ರಕ್ಷಣೆ ಮಾಡಲಾಗಿದೆ. ತಾಲೂಕಿನ ಕವಡಿಮಟ್ಟಿ, ದೇವೂರ, ಚಿರ್ಚನಕಲ್ಲ, ನಾಗರಾಳ, ಮುದೂರ, ಯರಝರಿ, ಕುಂಚಗನೂರ, ಜಂಗಮುರಾಳ, ಅಡವಿ, ಹುಲಗಬಾಳ, ಡೊಂಕಮಡು, ಜಲಪೂರ, ಆಲಕೊಪ್ಪರ, ಮಾದಿನಾಳ ಗ್ರಾಮಗಳಲ್ಲಿ ಮಳೆಗೆ ಮನೆಗಳು ಕುಸಿದಿವೆ.
ಮುದ್ದೇಬಿಹಾಳ, ಢವಳಗಿ, ನಾಲತವಾಡ ಹೋಬಳಿಗಳಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.