ವಿಜಯಪುರ :ಜಿಲ್ಲೆಯಲ್ಲಿ ಈಗಾಗಲೇ ರೈತರು ಬಿತ್ತಿದ ಬೀಜ ಮೊಳಕೆ ಹಂತದಲ್ಲಿದ್ದರಿಂದ ತೇವಾಂಶದ ಕೊರತೆಯಿಂದ ಮಳೆಯನ್ನು ಎದುರು ನೋಡುತ್ತಿದ್ದರು. ಆದರೆ, ಇದೀಗ ಸಕಾಲಕ್ಕೆ ಆಗಮಿಸಿದ ವರುಣನಿಂದ ಸಂತಸಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಶೇ.30ರಷ್ಟು ಪ್ರದೇಶದಲ್ಲಿ ಬಿತ್ತನೆ ಕೂಡ ಆಗಿತ್ತು. ಜೂನ್ ಎರಡು ಮತ್ತು 3ನೇ ವಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬಿತ್ತನೆ ಕುಂಠಿತಗೊಂಡಿತ್ತು. ಅಲ್ಲದೆ, ಬಿತ್ತನೆಯಾದ ಪ್ರದೇಶದಲ್ಲೂ ತೇವಾಂಶ ಕೊರತೆ ಎದುರಾಗಿತ್ತು. ವಾರದೊಳಗೆ ಮಳೆಯಾಗಿರದಿದ್ದರೆ ಮುಂಗಾರು ಕೃಷಿ ಕ್ಷೀಣಿಸುವ ಆತಂಕ ಎದುರಾಗಿತ್ತು.
ವಿಜಯಪುರದಲ್ಲಿ ಸಕಾಲಕ್ಕೆ ಬಂದ ಮಳೆ ಗುರುವಾರ ರಾತ್ರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿದೆ. ನಿಡಗುಂದಿ, ಹೂವಿನ ಹಿಪ್ಪರಗಿ, ಮಸೂತಿ, ದೇವರಹಿಪ್ಪರಗಿ, ತಿಕೋಟಾ, ದೇವಣಗಾಂವ ಭಾಗದಲ್ಲಿ ಜೋರಾಗಿ ಮಳೆ ಸುರಿದಿದೆ. ಹಳ್ಳ, ಕೊರೆಗಳಲ್ಲಿ ನೀರು ಹರಿದಿದ್ದು, ಹೊಲದ ಒಡ್ಡುಗಳಲ್ಲಿ ನೀರು ನಿಂತಿದೆ. ತಾಳಿಕೋಟೆ ಬಳಿಯ ಹಡಗಿನಾಳ ಮಾರ್ಗ, ದೇವರಹಿಪ್ಪರಗಿ ಬಳಿಯ ಸಾತಿಹಾಳ ಸೇತುವೆ ಬಳಿ ಡೋಣಿ ನದಿಯಲ್ಲಿ ಹೆಚ್ಚಿನ ನೀರು ಹರಿದಿದೆ.
ಮಳೆ ಪ್ರಮಾಣ :ತಾಲೂಕುವಾರು ಮಳೆಯ ಪ್ರಮಾಣವನ್ನು ನೋಡುವುದಾದ್ರೆ, ಬಸವನಬಾಗೇವಾಡಿ 29.4 ಮಿ.ಮೀ, ವಿಜಯಪುರ 29.7 ಮಿ.ಮೀ, ಇಂಡಿ 5.95 ಮಿ.ಮೀ, ಮುದ್ದೇಬಿಹಾಳ 34.75 ಮಿ.ಮೀ ಹಾಗೂ ಸಿಂದಗಿ ತಾಲೂಕಿನಲ್ಲಿ 13.28 ಮಿ ಮೀ ಮಳೆಯಾಗಿದೆ. ಮಮದಾಪುರದಲ್ಲಿ (92 ವಿ.ಮೀ ) ಅತಿ ಹೆಚ್ಚು ಮಳೆಯಾಗಿದ್ರೆ, ಸಾಸಾಬಾಳದಲ್ಲಿ 4.3 ಮಿ.ಮೀ ಕಡಿಮೆ ಮಳೆಯಾದ ವರದಿಯಾಗಿದೆ.