ವಿಜಯಪುರ: ಮೋದಿ ವಿಶ್ವ ಗುರು ಅಲ್ಲ ಪುಕ್ಕಲು ಗುರು ಎನ್ನುವ ಮಾಜಿ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಅಂತ ಹೇಳ್ತಾರೆ ಎಂದು ಮಾತಿನಲ್ಲಿಯೇ ತಿವಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಆಯ್ತು, ಅದು ಗೊತ್ತಿತ್ತಾ ಅವರಿಗೆ ? ಅದು ಆದ ಮೇಲೆ ಒಂದು ಹೆಜ್ಜೆ ಆದ್ರೂ ಅವರು ಮುಂದೆ ಬಂದಿದ್ದಾರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಪುಕ್ಕಲು ಯಾರು ಅನ್ನೋದು ಇಡೀ ವಿಶ್ವ ನೋಡುತ್ತೆ ಎಂದು ಟಾಂಗ್ ಕೊಟ್ಟರು.
ಮೋದಿ ಪ್ರಧಾನಿ ಆಗುವ ಮುಂಚೆ ಇಡೀ ವಿಶ್ವ ಪಾಕಿಸ್ತಾನದ ಜೊತೆ ಇತ್ತು. ಭಾರತ ಒಬ್ಬಂಟಿಯಾಗಿತ್ತು, ಇಂದು ಎಲ್ಲರೊಂದಿಗೆ ಸ್ನೇಹ ಬೆಳೆಸಿ ಶಸ್ತ್ರಾಸ್ತ್ರ ಜಾಸ್ತಿ ಮಾಡಿಕೊಂಡು ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ಅದಕ್ಕೆ ಮೀಸಲು ಇಟ್ಟಿದ್ದಾರೆ. ಇಂದು ಇಡೀ ವಿಶ್ವ ಭಾರತದೊಂದಿಗೆ ಇದೆ, ಪಾಕಿಸ್ತಾನ ಒಬ್ಬಂಟಿಯಾಗಿದೆ. ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದರು.
ರಾಹುಲ್ ಹೊಗಳಿದ ಈಶ್ವರಪ್ಪ: ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಒಂದು ವಿಷಯ ತಮಗೆ ಹೆಚ್ಚು ಮೆಚ್ಚುಗೆ ತಂದುಕೊಟ್ಟಿತು. ಅದು ಯಾತ್ರೆಯಲ್ಲಿ ಸೋನಿಯಾಗಾಂಧಿ ಶೂ ಲೇಸ್ ಬಿಚ್ಚಿದಾಗ ಅವರ ಮಗ ರಾಹುಲ್ ಗಾಂಧಿ ಕೆಳಗೆ ಕುಳಿತು ಲೇಸ್ ಹಾಕಿದ್ದನನ್ನು ಇಡೀ ದೇಶವೇ ನೋಡಿತು. ಇದು ನನಗೆ ಹೆಚ್ಚು ಮೆಚ್ಚುಗೆ ತಂದಿದೆ. ಅದು ಬಿಟ್ಟರೆ ಭಾರತ ಜೋಡೋದಿಂದ ಮತ್ತೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ರಾಹುಲ್ ಗಾಂಧಿ ನಡುವಳಿಕೆಯನ್ನು ಈಶ್ವರಪ್ಪ ಕೊಂಡಾಡುವ ಮೂಲಕ ಅಚ್ಚರಿ ಮೂಡಿಸಿದರು.