ವಿಜಯಪುರ:ಭಾರತ ದೇಶದಲ್ಲಿ ಈಗ ಪ್ರಜಾತಂತ್ರ ವ್ಯವಸ್ಥೆ ಕುಸಿದಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ ಎಂದು ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು, ಕೂಡಲೇ ರಾಹುಲ್ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಇದೇ ಭಾರತ ದೇಶದ ದೌರ್ಭಾಗ್ಯ. ಮನೆಯ ಮಾತುಗಳನ್ನು ವಿದೇಶಿ ನೆಲದಲ್ಲಿ ನಿಂತು ಹೇಳಬಾರದಿತ್ತು. ಅವರ ಅಭಿಪ್ರಾಯ ಹೇಳಲೇಬೇಕಾಗಿದ್ದರೆ, ಸಂಸತ್ ಅಧಿವೇಶನವಿತ್ತು. ಅಲ್ಲಿ ಮುಕ್ತವಾಗಿ ಚರ್ಚೆ ನಡೆಸಬೇಕಾಗಿತ್ತು. ಅದು ಬಿಟ್ಟು ಈ ರೀತಿ ಮನೆಯ ಗುಟ್ಟನ್ನು ಜಗತ್ತಿಗೆ ಗೊತ್ತಾಗುವಂತೆ ಮಾಡಿರುವುದು ಸರಿಯಲ್ಲ ಎಂದರು.
ಈ ಹಿಂದೆ ಇದೇ ರಾಹುಲ್ ಗಾಂಧಿ ಅಜ್ಜಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಆಗ ಪ್ರಜಾತಂತ್ರ ವ್ಯವಸ್ಥೆ ಕುಸಿದಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಿಖ್ ದಂಗೆಯಲ್ಲಿ ಇಂದಿರಾ ಗಾಂಧಿ ಗೋಲಿಬಾರ್ ಮಾಡಿಸಿದ್ದಾಗ, ಗೋ ರಕ್ಷಣೆ ವಿಚಾರವಾಗಿ ಸಾಧು ಸಂತರು ಧ್ವನಿ ಎತ್ತಿದ್ದಾಗ ಅವರ ಮೇಲೆ ದೌರ್ಜನ್ಯ ನಡೆಸಿದ್ದರು. ಆಗ ದೇಶದ ಪ್ರಜಾತಂತ್ರ ವ್ಯವಸ್ಥೆ ಕುಸಿದಿರಲಿಲ್ಲವೇ? ಅಂದು ಆಗದ ನೋವು ರಾಹುಲ್ಗೆ ಮೋದಿಯ ಅಭಿವೃದ್ಧಿ ಕಾರ್ಯದಿಂದ ಪ್ರಜಾತಂತ್ರ ವ್ಯವಸ್ಥೆ ಕುಸಿದಂತೆ ಕಾಣುತ್ತಿದೆ ಎಂದು ತಿರುಗೇಟು ನೀಡಿದರು.
ಮೋದಿಯ ಉತ್ತಮ ಕಾರ್ಯದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅದನ್ನು ಮರೆಮಾಚಲು ಪ್ರಧಾನಿ ಮೋದಿ ಅವರ ತಾಯಿ ಅಷ್ಟೇ ಅಲ್ಲ, ನಿಧನರಾಗಿರುವ ಅವರ ತಂದೆಯನ್ನು ಸಹ ಟೀಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ಟಾರ್ಗೆಟ್ ಮಾಡಲು ಹೋಗಿ ವಿದೇಶದಲ್ಲಿ ದೇಶದ ಮರ್ಯಾದೆ ತೆಗೆಯುತ್ತಿರುವ ರಾಹುಲ್ ಗಾಂಧಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಸಾಧ್ವಿ ನಿರಂಜನ ಜ್ಯೋತಿ ಆಗ್ರಹಿಸಿದರು.
ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ: ಸ್ಥಳೀಯ ಶಾಸಕರು ತಮಗೆ ಮುಸ್ಲಿಂ ಮತ ಬೇಡ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತಮಗೆ ಏನು ಗೊತ್ತಿಲ್ಲ. ಗೊತ್ತಿಲ್ಲದ ವಿಷಯ ಬಗ್ಗೆ ಮಾತನಾಡುವುದು ಸರಿಯಲ್ಲ. ದೇಶದಲ್ಲಿ ಹಿಂದು ಆಗಲಿ, ಮುಸ್ಲಿಂ ಆಗಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ಪ್ರಧಾನಿ ಮೋದಿ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ದೇಶದ ಎಲ್ಲ ಫಲಾನುಭವಿಗಳಿಗೂ ದೊರೆಯುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದಿಂದ ದೇಶದ ಎಲ್ಲ ಅರ್ಹ ಬಾಲಕಿಯರು ಈಗ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಅದನ್ನು ಎಲ್ಲರೂ ಸ್ವಾಗತಿಸಬೇಕು ಎಂದರು.
ಮಹಿಳೆಗೆ ಹೆಚ್ಚು ಮಹತ್ವ: ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದ ಮಹಿಳೆ ಸದ್ಯ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಮುಂದೆಯೂ ಮಹಿಳೆಗೆ ಹೆಚ್ಚಿನ ಮಹತ್ವ ನೀಡುವುದು ಪ್ರಧಾನಿ ಮೋದಿ ಕನಸಾಗಿದೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ನಾವು ಸಮಾವೇಶ ಮಾಡುವುದಿಲ್ಲ: ಕಟೀಲ್ ವ್ಯಂಗ್ಯ