ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ, ಪೂಜೆ ನೆರವೇರಿಸಿ ಪ್ರಧಾನಿ ಮೋದಿ ಗೆಲುವಿಗೆ ಪ್ರಾರ್ಥಿಸಿದರು.
ಮೋದಿ ನಾಯಕತ್ವದಲ್ಲಿ ದೇಶ ಬಲಿಷ್ಠ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಮುಂದಿನ ಹತ್ತು ಹದಿನೈದು ವರ್ಷಗಳ ಕಾಲ ಮೋದಿ ಪ್ರಧಾನಿಯಾಗಬೇಕೆಂದ ಯತ್ನಾಳ್, ಅಮೆರಿಕಾ, ರಷ್ಯಾ ಹಾಗೂ ಇತರ ರಾಷ್ಟ್ರಗಳನ್ನು ಭಾರತ ಮೋದಿ ನಾಯಕತ್ವದಲ್ಲಿ ಹಿಂದಿಕ್ಕಲಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಹುಲ್ ವಿರುದ್ಧ ವಾಗ್ದಾಳಿ:
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್ , ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ. ಇಂಥವರ ಕೈಯಲ್ಲಿ ಸಿಲುಕಿ ಕಾಂಗ್ರೆಸ್ ಅವನತಿ ಅಂಚಿಗೆ ತಲುಪಿದೆ. ಉತ್ತರ ಪ್ರದೇಶದಲ್ಲಿ ಸೋಲುವ ಭೀತಿಯಿಂದ ಕೇರಳಕ್ಕೆ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ರಾಹುಲ್ ಗಾಂಧಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೇರಳದಲ್ಲಿಯೂ ಸಹ ಹಿಂದೂ ದೇವರಿದ್ದಾರೆ. ಕೇರಳದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪಾಕಿಸ್ತಾನ ಪರವಿರುವ ಮುಸ್ಲಿಂ ಲೀಗ್ ಸೇರಿದಂತೆ ಇತರ ಮುಸ್ಲಿಂರು ರಾಹುಲ್ಗೆ ಸ್ವಾಗತ ಕೋರಿದ್ದಾರೆ. ಇದು ವಿಚಾರ ಮಾಡಬೇಕಾದ ಸಂಗತಿ ಎಂದರು.
ಜೆಡಿಎಸ್-ಕಾಂಗ್ರೆಸ್ ಮಧ್ಯೆ ಲೋಕಸಭಾ ಚುನಾವಣೆಗೂ ಮುನ್ನವೇ ಕಚ್ಚಾಟ ನಡೆದಿದೆ. ಅನಿವಾರ್ಯವಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಚ್ಚಾಟ ಇನ್ನೂ ಹೆಚ್ಚಾಗಲಿದೆ ಎಂದರು.
ಪುಲ್ವಾಮ ಘಟನೆ ನಡೆಯುತ್ತದೆ ಎಂಬ ಸುಳಿವು ನನಗೆ ಎರಡು ವರ್ಷಗಳ ಹಿಂದೆ ಇತ್ತೆಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ, ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ಈ ರೀತಿ ಮಾತನಾಡುವುದು ಸರಿಯಲ್ಲ. ಮೊದಲೇ ತಿಳಿದಿದ್ದರೆ ಯಾಕೆ ಬಹಿರಂಗ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು. ಚುನಾವಣಾ ಗಿಮಿಕ್ಗಾಗಿ ಸಿಎಂ ಕುಮಾರಸ್ವಾಮಿ ಹೀಗೆ ಮಾತನಾಡಬಾರದು ಎಂದರು.