ಮುದ್ದೇಬಿಹಾಳ: ಮತಕ್ಷೇತ್ರದ ತಾಳಿಕೋಟಿ ಪಟ್ಟಣದ ಹಾಗು ವಿವಿಧ ವಾರ್ಡ್ ಗಳಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ರಸ್ತೆ ಕಾಮಗಾರಿ ಹಾಗೂ ಚರಂಡಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಕೂಡಲೇ ಈ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ ಅನ್ನು ತಡೆಹಿಡಿದು ಸೂಕ್ತ ತಪಾಸಣೆ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಕೋನದಿಂದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಎಸ್.ಎಫ್.ಸಿ. ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಅತ್ಯಂತ ಅವೈಜ್ಞಾನಿಕವಾಗಿ, ಕಳಪೆಮಟ್ಟದಿಂದ ಕೂಡಿದೆ. ಈ ವಿಷಯದ ಕುರಿತು ಪುರಸಭೆಯ ನೂತನ ಸದಸ್ಯರುಗಳು ಪ್ರತಿಭಟಿಸಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತಿಳಿಸಿದ್ದರೂ ಕೂಡಾ ಗುತ್ತಿಗೆದಾರರು ಮಾಡುತ್ತಿರುವ ಕೆಲಸವನ್ನು ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅಲ್ಲದೇ ಅವರ ಮೇಲೆ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ.