ಮುದ್ದೇಬಿಹಾಳ: 2008ರಲ್ಲಿ ಅನ್ಯಧರ್ಮೀಯರೊಂದಿಗೆ ಮಹಾವೀರ ಜಯಂತಿ ಆಚರಣೆ ಮಾಡಿದ್ದಕ್ಕೆ ಜೈನ ಸಮಾಜದಿಂದ ಬಹಿಷ್ಕಾರ ಹಾಕಿದ್ದ ನಾಲ್ವರು ಆರೋಪಿಗಳಿಗೆ ಪಟ್ಟಣದ ಸಿವಿಲ್ ನ್ಯಾಯಾಲಯದಿಂದ ಅ.28 ರಂದು ಶಿಕ್ಷೆ ಪ್ರಕಟವಾಗಿದೆ ಎಂದು ಪ್ರಕರಣದಲ್ಲಿ ವಾದಿಯಾಗಿದ್ದ ಪಟ್ಟಣದ ಅರಿಹಂತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಬಿ.ಸಗರಿ ಹೇಳಿದರು.
ಪಟ್ಟಣದ ಅರಿಹಂತ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 18/4/2008 ರಂದು ಜೈನ ಸಮಾಜದ ಆರೋಪಿತರಾದ ತವನಪ್ಪ ಮನೋಹರ ದಂಡಾವತಿ, ರವೀಂದ್ರ ಮನೋಹರ ದಂಡಾವತಿ, ಶಾಂತಪ್ಪ ಪದ್ಮಣ್ಣ ದಂಡಾವತಿ, ಜಯಪಾಲ ಪದ್ಮಣ್ಣ ಶೆಟ್ಟಿ ಇವರು ಅವಮಾನ ಆಗುವ ರೀತಿಯಲ್ಲಿ ಚರಿತ್ರೆ ಹಾಗೂ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡಿ ನೂರಾರು ಕರಪತ್ರಗಳನ್ನು ಮುದ್ದೇಬಿಹಾಳ, ತಾಳಿಕೋಟಿ, ಸರೂರ, ಯರಝರಿ ಹಾಗೂ ಇನ್ನಿತರ ಜೈನ ಸಮಾಜದವರಿಗೆ ಹಂಚಿ ಮಾನನಷ್ಟ ಮಾಡುವ ದುರುದ್ದೇಶ ಹೊಂದಿದ್ದರು. ಇವರ ವಿರುದ್ಧವಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು 2009ರಲ್ಲಿ ದಾಖಲಿಸಿ 12 ವರ್ಷಗಳ ಕಾಲ ಅವಿರತವಾಗಿ ಕೇಸ್ ಸಿ.ಸಿ ನಂ:274/2009ರ ಅಡಿ ನ್ಯಾಯಾಲಯದಲ್ಲಿ ದೂರು ನೀಡಿ ಸ್ವತಃ ನಾನೇ ಕೇಸ್‌ನಲ್ಲಿ ವಾದ ಮಾಡಿ ಗೆಲುವು ಸಾಧಿಸಿದ್ದೇನೆ ಎಂದು ಅವರು ತಿಳಿಸಿದರು.