ವಿಜಯಪುರ: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಜಮುಖಿ ಕಾರ್ಯಗಳಿಂದ ಪ್ರೇರಣೆಗೊಂಡಿರುವ ಭೀಮಾತೀರದ ಯುವಕರ ತಂಡವೊಂದು ಸದ್ದಿಲ್ಲದೇ ನೊಂದವರ ಬಾಳಿಗೆ ಬೆಳಕಾಗುತ್ತಿದ್ದಾರೆ. ಇದೀಗ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ 12 ವರ್ಷದ ಬಾಲಕನ ಶಸ್ತ್ರ ಚಿಕಿತ್ಸೆಗೆ ಧನಸಹಾಯ ಮಾಡಲು ಸಾಮಾಜಿಕ ಜಾಲತಾಣ, ಶಾಲೆ, ಕಾಲೇಜ್ಗಳಿಗೆ ಭೇಟಿ, ಉದ್ಯಮಿ, ರಾಜಕಾರಣಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ.
ಹೌದು, ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ದಯಾನಂದ ಹಾಗೂ ಅಶ್ವಿನಿ ದಯಾನಂದ ವಾಲಿ ಎಂಬುವರ ಪುತ್ರ ಈರಣ್ಣ ವಾಲಿ ಹುಟ್ಟಿನಿಂದಲೇ ಒಂದೇ ಕಿಡ್ನಿ ಹೊಂದಿದ್ದನು. 7ನೇ ವರ್ಷದವನಿದ್ದಾಗ ಇನ್ನೊಂದು ಕಿಡ್ನಿ ಸಹ ಸರಿಯಾಗಿ ಬೆಳವಣಿಗೆಯಾಗದೇ ವೈಫಲ್ಯ ಕಂಡಿದೆ. ಬಾಲಕನ ಜೀವ ಉಳಿಯಬೇಕಾದ್ರೆ ಒಂದು ತಿಂಗಳೊಳಗಾಗಿ ಮೂತ್ರಪಿಂಡದ ಕಸಿ ಮಾಡಬೇಕಾಗಿದೆ. ತಂದೆಯನ್ನು ಕಳೆದುಕೊಂಡಿರುವ ಈರಣ್ಣ, ತಾಯಿಯ ಆರೈಕೆಯಲ್ಲಿದ್ದಾನೆ. ಕಸಿ ಮಾಡಲು ಸುಮಾರು 25 ಲಕ್ಷ ರೂ. ಖರ್ಚಾಗಲಿದ್ದು, ಬಡವರಾಗಿರುವ ಇವರಿಗೆ ಅಷ್ಟು ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ.
ಸಹಾಯಕ್ಕೆ ನಿಂತ ಟೀಂ ಚಡಚಣ ಹುಡುಗರು: ಚಡಚಣದಲ್ಲಿ ವಿವಿಧ ಹುದ್ದೆಯಲ್ಲಿರುವ 13 ಯುವಕರು ಪುನೀತ್ ಪ್ರೇರಣೆಯಿಂದ ತಂಡ ಕಟ್ಟಿಕೊಂಡು ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಸಂಕಷ್ಟ ಅನುಭವಿಸುತ್ತಿರುವವರ ಸಹಾಯಕ್ಕೆ ಮುಂದಾಗುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಬಳದ ಕೆಲ ಭಾಗ ಹಾಗೂ ದಾನಿಗಳ ಸಹಾಯದಿಂದ ಸಂಕಷ್ಟದಲ್ಲಿರುವರಿಗೆ ನೆರವಾಗುತ್ತಿದ್ದಾರೆ. ಈಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕ ಈರಣ್ಣನ ನೆರವಿಗೆ ನಿಂತಿದ್ದಾರೆ.
ಇದನ್ನೂ ಓದಿ:ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ವರ್ಷದ ಕಂದಮ್ಮ: ಈ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ