ವಿಜಯಪುರ: ಕಳೆದ ಆರು ತಿಂಗಳಿನಿಂದ ಕೋವಿಡ್-19 ಪೊಲೀಸರನ್ನು ಹೈರಾಣಾಗಿಸಿದೆ. ಆದರೆ, ಈ ಕಾರಣದಿಂದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕರ ರಕ್ಷಣೆ ನಮ್ಮ ಕೆಲಸವಾಗಿದ್ದು, ಶೇ.99 ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಈಗ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 6 ಸಾವಿರ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ತಗುಲಿತ್ತು. ಅದರಲ್ಲಿ 44 ಪೊಲೀಸರು ಮೃತಪಟ್ಟಿದ್ದಾರೆ. ಈಗ ಶೇ.99ರಷ್ಟು ಸಿಬ್ಬಂದಿ ಗುಣಮುಖರಾಗಿ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಅನಿವಾರ್ಯ ಆಗಿದೆ. ಕೊರೊನಾ ಈಗ ಕೇವಲ ರಸ್ತೆಯಲ್ಲಿ ಉಳಿದಿಲ್ಲ. ಮನೆ, ಮನೆ ತಲುಪಿದೆ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕಿದೆ. ಈ ಕಾರಣಕ್ಕಾಗಿ ವಿವಿಧ ಅಪರಾಧ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳನ್ನು ನ್ಯಾಯಾಲಯಕ್ಜೆ ಹಾಜರು ಪಡಿಸದೇ, ವಿಡಿಯೋ ಸಂವಾದ ಮೂಲಕ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ನಾಲ್ಕೈದು ವರ್ಷದಲ್ಲಿ ತನಿಖಾ ವರದಿಯನ್ನು ಸಹ ನ್ಯಾಯಾಲಯಕ್ಕೆ ತಂತ್ರಜ್ಞಾನದ ಮೂಲಕ ಸಲ್ಲಿಸುವ ಅವಕಾಶ ದೊರೆಯಲಿದೆ. ಕೋವಿಡ್ ಸೋಂಕಿನಿಂದ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಸರಿಯಾಗಿ ಬಳಕೆಯಾಗುತ್ತಿದೆ. ಇದೊಂದು ತಂತ್ರಜ್ಞಾನದ ಕೊಡುಗೆಯಾಗಿದೆ ಎಂದು ಹೇಳಿದರು.
112 ತುರ್ತು ಕರೆ ವಿಸ್ತರಣೆ: ಕೋವಿಡ್ ವೇಳೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಮಹಾನಗರದಲ್ಲಿ ಜಾರಿ ಮಾಡಲಾಗಿದ್ದ 112 ಉಚಿತ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಮುಂದಿನ 2-3ತಿಂಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ವಿಶ್ವಾಸ ವ್ಯಕ್ತಪಡಿಸಿದರು.
112 ತುರ್ತು ಸಹಾಯವಾಣಿ ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗಿದೆ. ಜನರು ಈ ತುರ್ತು ಸೇವೆ ಬಗ್ಗೆ ಸಂತೃಪ್ತಿ ವ್ಯಕ್ತ ಪಡಿಸಿದ್ದಾರೆ. ಮುಂದಿನ ದಿನದಲ್ಲಿ ಪೊಲೀಸ್ ಕುಟುಂಬಗಳ ಶುಭಕಾರ್ಯಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಉತ್ತಮ ವಸತಿ ಗೃಹ, ಅಗತ್ಯ ಸೌಲಭ್ಯಗಳನ್ನು ಪೊಲೀಸ್ ಸಿಬ್ಬಂದಿಗೆ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.