ವಿಜಯಪುರ: ಕಾಯ್ದಿರಿಸಿದ ಮತಯಂತ್ರಗಳ ಕುರಿತು ಗೊಂದಲ ಉಂಟಾಗಿ ಜನರು ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ (ಬುಧವಾರ) ರಾತ್ರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮದಲ್ಲಿ ನಡೆಯಿತು. ಗ್ರಾಮದಲ್ಲಿ ಕಾಯ್ದಿಟ್ಟ ಮತಯಂತ್ರಗಳನ್ನು ಸಾಗಿಸುತ್ತಿದ್ದಾಗ ಗ್ರಾಮಸ್ಥರು ತಡೆದರು. ಮತದಾನ ಮುಗಿದ ಬಳಿಕ ಚುನಾವಣಾ ಸಿಬ್ಬಂದಿ ವಿಜಯಪುರಕ್ಕೆ ಇವಿಎಂ, ವಿವಿಪ್ಯಾಟ್ ಮಶಿನ್‌ಗಳನ್ನು ವಿಜಯಪುರ ನಗರದ ಸೈನಿಕ ಶಾಲೆಯ ಸ್ಟ್ರಾಂಗ್ ರೂಮ್ಗೆ ಸಾಗಿಸುವಾಗ ಗ್ರಾಮಸ್ಥರು ಅಡ್ಡಿಪಡಿಸಿದರು.
ಕಾಯ್ದಿಟ್ಟ ಮತಯಂತ್ರಗಳನ್ನು ನಕಲಿ ಮತಯಂತ್ರಗಳಂದು ಗ್ರಾಮಸ್ಥರು ಅನಮಾನ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಗಳು ಮನವರಿಕೆ ಮಾಡಿದರೂ ಗ್ರಾಮಸ್ಥರು ಪಟ್ಟು ಸಡಿಸಲಿಲ್ಲ. ಒಂದು ವೇಳೆ ತಾಂತ್ರಿಕ ದೋಷ ಕಂಡುಬಂದಾಗ ಕೂಡಲೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲು ಕಾಯ್ದಿಟ್ಟ ಮತಯಂತ್ರ ತರಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿ ಹೇಳಿದರು. ಸ್ಥಳಕ್ಕೆ ಜಿಲ್ಲಾ ಚುನಾವಣಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮತಯಂತ್ರ ಸಾಗಿಸಲು ಗ್ರಾಮಸ್ಥರು ಅನುವು ಮಾಡಿಕೊಟ್ಟರು.