ಮುದ್ದೇಬಿಹಾಳ:ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕೊರೊನಾ ಕಾರಣದಿಂದ ಹಾಸ್ಟೆಲ್ ಮುಚ್ಚಿದ್ದ ಅವಧಿಯಲ್ಲಿನ ವೇತನ ಪಾವತಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಹಾಸ್ಟೆಲ್ ಹೊರಗುತ್ತಿಗೆ ನೌಕರರ ವೇತನ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ಧರಣಿ ನಿರತ ಹೊರಗುತ್ತಿಗೆ ನೌಕರರಿಗೆ ಬೆಂಬಲ ಸೂಚಿಸಿದ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ, ನ್ಯಾಯಯುತ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಯವರು ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಹಾಸ್ಟೆಲ್‌ಗಳು ಮುಚ್ಚಿರುವ ಕಾರಣದಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ಬದುಕಿಗೆ ಆಧಾರವಾಗಿದ್ದ ಕೆಲಸವೂ ಇಲ್ಲದ್ದರಿಂದ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಲು ಹಣ ಇಲ್ಲದಂತಾಗಿದೆ. ಕೊರೊನಾ ವೈರಸ್‌ನಿಂದಾಗಿ ಗುತ್ತಿಗೆ, ಹೊರಗುತ್ತಿಗೆ ದಿನಗೂಲಿ ನೌಕರರಿಗೆ ವೇತನ ಪಾವತಿಸುವಂತೆ ನಿರ್ದೇಶನ ಇದ್ದರೂ ಸಹ ಜಾರಿಗೆ ಬರುತ್ತಿಲ್ಲ. ಪ್ರತಿ ದಿನವೂ ಸಂಕಷ್ಟದಲ್ಲಿ ಕಣ್ಣೀರು ಹಾಕುತ್ತಿರುವ ಕುಟುಂಬಗಳಿಗೆ ಕನಿಷ್ಠ ಸಹಾಯ ಸಿಗುತ್ತಿಲ್ಲ ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ಎಸ್.ಮಳಗಿ, ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿ, ಕಚೇರಿಗೆ ವಾಪಸ್ಸಾದರು. ಆದರೆ, ಹೊರಗುತ್ತಿಗೆ ನೌಕರರು ಮಾತ್ರ ತಮಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವೇತನ ಪಾವತಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ತಹಶೀಲ್ದಾರ್ ಕಚೇರಿಯ ಆವರಣದಲ್ಲಿಯೇ ಪ್ರತಿಭಟನೆ ನಡೆಸಲು ಆರಂಭಿಸಿದರು.
ಬಳಿಕ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಿಬ್ಬಂದಿ ಎಸ್.ಎಸ್.ಪೂಜಾರಿ ತಹಶೀಲ್ದಾರ್ ಎದುರಿಗೆ ಸೋಮವಾರದವರೆಗೆ ಕಾಲಾವಕಾಶ ಪಡೆದುಕೊಂಡು ವೇತನ ಪಾವತಿಸುವ ಭರವಸೆ ನೀಡಿದ ಬಳಿಕ ಧರಣಿ ಅಂತ್ಯಗೊಳಿಸಿದರು.