ವಿಜಯಪುರ : ಇಂದು ಸಮಾಜಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸಾಧಕ ಬಾಧಕಗಳ ಕುರಿತು ಅಧಿಕಾರಿಗಳು ಡಿಸಿಎಂ ಗೋವಿಂದ ಕಾರಜೋಳಗೆ ಮನವರಿಕೆ ಮಾಡಿದರು. ಪ್ರಸಕ್ತ ವರ್ಷದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಕಾಮಗಾರಿ ಹಾಗೂ ಸ್ಥಿತಿಗತಿಗಳ ಕುರಿತು ಡಿಸಿಎಂ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರರಿಂದ ಮಾಹಿತಿ ಪಡೆದರು.
2018-19 ಸಾಲಿನಲ್ಲಿ ಜಿಲ್ಲೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಲ್ಲಿ 5,376 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 46 ಬಾಲಕ ಹಾಗೂ 10 ಬಾಲಕಿಯ ಹಾಸ್ಟೆಲ್ಗಳಿವೆ. ಮೆಟ್ರಿಕ್ ನಂತರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಒಟ್ಟು 3,457 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 9 ಬಾಲಕರ ಹಾಗೂ 6 ಬಾಲಕಿಯರ ವಸತಿ ನಿಲಯಗಳಿವೆ ಎಂದು ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರ ಡಿಸಿಎಂ ಅವರಿಗೆ ತಿಳಿಸಿದರು.