ವಿಜಯಪುರ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು. ಜೊತೆಗೆ ಸಂತ್ರಸ್ತ ಯುವತಿಗೆ ರಕ್ಷಣೆ ನೀಡಿ ನ್ಯಾಯಾಧೀಶರ ಎದುರು ಹೇಳಿಕೆ ನೀಡುವಷ್ಟು ಭದ್ರತೆಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೋ.ರಾಜು ಆಲಗೂರ ಸುದ್ದಿಗೋಷ್ಠಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ಪ್ರಕರಣ ತಾರ್ತಿಕ ಅಂತ್ಯ ಕಾಣಬೇಕಾದರೆ ಸಂತ್ತಸ್ತ ಮಹಿಳೆ ಹೇಳಿಕೆ ನೀಡುವಷ್ಟು ಭದ್ರತೆಯನ್ನು ರಾಜ್ಯ ಸರ್ಕಾರ ಒದಗಿಸಬೇಕು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಯುವತಿ ಹೊರಗಡೆ ಬರದೆ ವಿಡಿಯೋ ಮೂಲಕ ತನ್ನ ಹೇಳಿಕೆಗಳನ್ನು ನೀಡುತ್ತಿದ್ದಾಳೆ ಎಂದರು.
ಯುವತಿ ಪೋಷಕರು ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರ ಒತ್ತಡಕ್ಕೆ ಒಳಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರು ಹೇಳುತ್ತಿದ್ದಾರೆ. ತಮ್ಮ ಮಗಳ ಮೇಲೆ ನಡೆದ ದೌರ್ಜನ್ಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಬದಲು ಬೆಂಗಳೂರಿಗೆ ಹೋಗಿ ದೂರು ನೀಡುವ ಅವಶ್ಯಕತೆ ಏಕೆ ಇತ್ತು ಎಂದು ಪ್ರಶ್ನಿಸಿದರು.
ಸರ್ಕಾರ ರಮೇಶ್ ಜಾರಕಿಹೊಳಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಇದರ ಜೊತೆ 6 ಸಚಿವರು ಸಿಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾದರೆ ಅವರ ಸಿಡಿ ಸಹ ಇದೆ ಎಂದು ಅವರೇ ಹೇಳಿಕೊಂಡಂತಾಗಿದೆ ಎಂದರು.
ನಿನ್ನೆ ಬೆಳಗಾವಿ ಉಪಚುನಾವಣೆ ಕುರಿತು ಮುಖಂಡರ ಸಭೆ ನಡೆಸಲು ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾರಿಗೆ ರಮೇಶ್ ಬೆಂಬಲಿಗರು ಚಪ್ಪಲಿ ಎಸೆದಿದ್ದಾರೆ. ಒಬ್ಬ ವಿರೋಧ ಪಕ್ಷದ ಮುಖಂಡರಿಗೆ ಭದ್ರತೆ ನೀಡಲು ಸರ್ಕಾರಕ್ಕೆ ಆಗಿಲ್ಲ. ಇನ್ನು ಸಂತ್ರಸ್ತ ಯುವತಿ ಪೊಲೀಸರ ಎದುರು ಹೇಳಿಕೆ ನೀಡಲು ಬಂದರೆ ಅವರ ರಕ್ಷಣೆ ರಾಜ್ಯ ಸರ್ಕಾರ ಮಾಡಲು ಸಾಧ್ಯವೇ? ಹಾಗಾಗಿ ಸಂತ್ರಸ್ತ ಯುವತಿ ಕೋರ್ಟ್ ಎದುರು ಹಾಜರಾಗಲು ಹಿಂದೇಟು ಹಾಕುತ್ತಿದ್ದಾಳೆ. ತಕ್ಷಣ ಸರ್ಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ, ಸಂತ್ರಸ್ತ ಯುವತಿಯ ಮಹತ್ವದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.