ವಿಜಯಪುರ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು. ಜಿಲ್ಲೆಯ ಇಂಡಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಸರ್ಕಾರ ಶ್ರೀಮಂತರ ಪರ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಸಿಲಿಂಡರ್ ಸೇರಿದಂತೆ ದಿನ ಬಳಕೆ ವಸ್ತುಗಳು ಗಗನಕ್ಕೆ ಏರಿವೆ, ಇದರ ಜೊತೆಗೆ 40 ಪರ್ಸ್‌ಂಟ್ ಸರ್ಕಾರ ಎಂದು ಜಗಜಾಹಿರಾಗಿದೆ. ಇವರಿಗೆ ದುಡ್ಡು ಕೊಡಲಾಗದೇ ಗುತ್ತಿಗೆದಾರರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಮುಚ್ಚಿ ಹಾಕಲಾಯಿತು. ಎಂಎಲ್‌ಎಗಳನ್ನು ಖರೀದಿ ಮಾಡಿ, ಅನಧಿಕೃತ ಸರ್ಕಾರ ರಚನೆ ಮಾಡಿ, ಆರಂಭದಲ್ಲಿ ಲೂಟಿಗೆ ಇಳಿದಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡುವುದು ಬಿಟ್ಟು ಹಣ ಲೂಟಿ ಹೊಡೆಯುವದರಲ್ಲಿ ಕಾಲ ಕಳೆದಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ವಶ್ರೇಷ್ಠ, ವಿಕಾಸ ಪುರುಷ ಎಂದು ಪ್ರಧಾನಿ ಮೋದಿಯನ್ನು ಕರಿತಾರೆ. ಆದ್ರೆ ಈ ಮೋದಿ ಕರ್ನಾಟಕದಲ್ಲಿ ಬಂದು ಹೇಳ್ತಾರೆ, ನನ್ನ ಕನಸಿದೆ ಕರ್ನಾಟಕ ವಿಕಾಸ ಮಾಡೋದು ಎಂತಾರೆ. ಆದರೆ ನಿಮ್ಮ ಕನಸು ಏಕೆ ನನಸು ಮಾಡೋಕೆ ಆಗಿಲ್ಲಾ? ಯಾಕಂದ್ರೆ ನಿಮ್ಮ ಬಿಜೆಪಿ ಸರ್ಕಾರ 40 ಪರ್ಸೆಂಟ್ ಲೂಟಿ ಮಾಡ್ತಿದೆ. ನೀವು ಕಣ್ಣುಮುಚ್ಚಿ ಕನಸು ಕಾಣುತ್ತಿದ್ದೀರಿ, ಹಾಗಾಗಿ ನೀವು ಭ್ರಷ್ಟಾಚಾರ ಮಾಡುವ ಸರ್ಕಾರವನ್ನು ತಡೆಯಲಿಲ್ಲ ಎಂದು ಟೀಕಿಸಿದರು.
ಇಂದು ಚುನಾವಣೆ ಬಂದಿದೆ. ವಿಕಾಸ, ಆಸ್ಪತ್ರೆ, ರಸ್ತೆ, ಅಭಿವೃದ್ಧಿ ಯಾಕೆ ಮಾಡಲಿಲ್ಲ. ಮೂರು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದ್ದೀರಿ. ನೀವು ಲೂಟಿ ಮಾಡುವ ಹಣದಲ್ಲಿ, 2250ಕಿ.ಲೋ ರಸ್ತೆ ಮಾಡಬಹುದು, 30ಸಾವಿರ ಸ್ಮಾರ್ಟ್ ಕ್ಲಾಸ್ ಮಾಡಬಹುದು, 30 ಲಕ್ಷ ಮನೆ ಕಟ್ಟಿ ಬಡವರಿಗೆ ಹಂಚಬಹುದಿತ್ತು. ಐಟಿ ಹಬ್ ಆಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸಾಕಷ್ಟು ಕಂಪನಿಗಳು ಚೆನ್ನೈ, ಹೈದಾರಬಾದ್‌ಗೆ ಹೋಗುತ್ತಿವೆ. ಅವರಿಗೆ ಮೂಲಸೌಲಭ್ಯ ಕಲ್ಪಿಸಿದ್ದರೆ, ಆ ಕಂಪನಿಗಳು ಬೆಂಗಳೂರಿನಲ್ಲಿಯೇ ಇರುತ್ತಿದ್ದವು. ಕನ್ನಡಿಗರಿಗೆ ಉದ್ಯೋಗ ದೊರೆಯಬಹುದಿತ್ತು. ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಆದ್ರೆ ಯಾರಿಗೂ ನೌಕರಿ ಸಿಕ್ಕಿಲ್ಲ. ಇತ್ತ ರೈತರಿಗೆ ಅನುಕೂಲ ಆಗಿಲ್ಲ, ಇವರು ಯಾವುದೇ ಕೆಲಸ ಮಾಡಿಲ್ಲಾ. ದೊಡ್ಡ ದೊಡ್ಡ ಬ್ಯುಸಿನೆಸ್ ಗಳನ್ನು ತಮ್ಮ ಆಪ್ತರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಪ್ರತಿಬಾರಿ ಚುನಾವಣೆ ಬಂದಾಗ ಅವರಿಗೆ ನೀವು ಪ್ರಶ್ನೆನ್ನು ಕೇಳೊದಿಲ್ಲ ಏಕೆ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದ ಪ್ರಿಯಾಂಕಾ, ಜಾತಿಯತೆ ಮಾಡಿ ಚುನಾವಣೆ ಗೆಲ್ಲುತ್ತೇವೆ ಎಂದು ಅವರಿಗೆ ಗೊತ್ತಿದ್ರೆ ಅವರೇಕೆ ಅಭಿವೃದ್ಧಿ ಮಾಡ್ತಾರೆ. ನಿಮ್ಮ ವೋಟ್ ನಿಮ್ಮ ವಿಕಾಸಕ್ಕಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಇಂದು ನಾನು ನಿಮ್ಮ ಮುಂದೆ ಬಂದಿದ್ದೇನೆ. ಅವರಿಗೆ ಹೇಳಿ ನಿಮ್ಮದು ಬಹಳ ಆಗಿದೆ, ನೀವು ಹೊರಡಿ ಎಂದು ಹೇಳಿ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತನ್ನಿ, ನಾವು ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.