ವಿಜಯಪುರ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಸರ್ಕಾರವು ಆರ್ಟಿಇ ಕಾಯ್ದೆಯನ್ನು ಜಾರಿಗೊಳಿಸಿದೆ. ಖಾಸಗಿ ಅನುದಾನ ಸಹಿತ, ಅನುದಾನ ರಹಿತ ಹಾಗೂ ಪಬ್ಲಿಕ್ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಟಿಇ ಕಾಯ್ದೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.
ಈ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಶಾಲೆಗೆ ಸೇರಬಹುದು. ಆ ವಿದ್ಯಾರ್ಥಿಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಸರಿಯಾಗಿ ಆರ್ಟಿಇ ಅನುದಾನ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಶಿಕ್ಷಕರಿಗೆ ಸಂಬಳ ನೀಡುವುದು ದುಸ್ತರವಾಗಿದೆ.
ಬಿಡುಗಡೆಯಾಗದ ಆರ್ಟಿಇ ಅನುದಾನ ಹಣ ಜಿಲ್ಲೆಯ 618 ಖಾಸಗಿ ಶಾಲೆಗಳಲ್ಲಿ ಆರ್ಟಿಇ ಕಾಯ್ದೆಯಡಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 2004ರಿಂದ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಇದೀಗ ಶಾಲೆ ಆರಂಭವಾಗಿಲ್ಲ. ಆರ್ಟಿಇ ಅನುದಾನ ಸಹ ಬಿಡುಗಡೆ ಮಾಡದ ಕಾರಣ ಶಿಕ್ಷಕರ ಗೋಳು ಕೇಳುವವರಿಲ್ಲ. ಸರಿಯಾದ ಸಂಬಳವಿಲ್ಲದೆ ಶಿಕ್ಷಕರು ಪರ್ಯಾಯ ಉದ್ಯೋಗದತ್ತ ಮುಖ ಮಾಡಿದ್ದಾರೆ.
ಕಳೆದ 7 ತಿಂಗಳಿಂದ ಶಾಲೆಗಳು ಆರಂಭಗೊಂಡಿಲ್ಲ. ಆದರೂ ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಪ್ರವೇಶಕ್ಕಾಗಿ ಆನಲೈನ್ ಅರ್ಜಿ ತುಂಬಲು ಅವಕಾಶ ನೀಡಲಾಗಿದೆ. ಸದ್ಯ ಜಿಲ್ಲೆಯ 618 ಖಾಸಗಿ ಶಾಲೆಯಲ್ಲಿ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.
ಇನ್ನು 2019-20ನೇ ಸಾಲಿನ ಅನುದಾನದ ಹಣ ಎರಡು ಕಂತಿನಲ್ಲಿ ಬಿಡುಗಡೆಯಾಗಿದ್ದು, ಮೊದಲ ಕಂತಿನಲ್ಲಿ 8 ಕೋಟಿ ರೂ. ಹಾಗೂ ಎರಡನೇ ಕಂತಿನ 5 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ 13 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ.