ವಿಜಯಪುರ/ಬೆಂಗಳೂರು/ಬೆಳಗಾವಿ:ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಮತಭೇಟೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದು, ತಲಾ ಎರಡು ದಿನದಂತೆ ಮೂರು ಬಾರಿ ಆರು ದಿನಗಳ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ರೋಡ್ ಶೋ ಮೂಲಕ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದಾರೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಮತದಾನಕ್ಕೆ ಹನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ರಾಜ್ಯದ ಮತದಾರರ ಮನಸ್ಸು ಗೆಲ್ಲಲು ಎಲ್ಲ ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಆಡಳಿತಾರೂಢ ಬಿಜೆಪಿ ಪ್ರಚಾರದಲ್ಲಿ ತುಸು ಮುಂದಿದೆ. ಪಕ್ಷದ ವರಿಷ್ಠ ನಾಯಕರು ಕರ್ನಾಟಕ ಚುನಾವಣಾ ಪ್ರಚಾರದ ಕಣಕ್ಕೆ ಪ್ರವೇಶಿಸಿದ್ದು, ಮತ ಭೇಟೆ ಆರಂಭಿಸಿದ್ದಾರೆ. ಕಮಲ ಕಲಿಗಳ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಮತ ಭೇಟಿಗೆ ಇಳಿದಿದ್ದು, ನಾಳೆ ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮೋದಿ ಮೋಡಿ ಮಾಡಲಿದ್ದಾರೆ. ಮುಂದಿನ ಎರಡು ವಾರದಲ್ಲಿ ಒಟ್ಟು ಆರು ದಿನ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 8:20ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟು 10:20ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ 10:50 ಕ್ಕೆ ಹುಮ್ನಾಬಾದ್ ತಲುಪಲಿದ್ದಾರೆ. ಹುಮ್ನಾಬಾದ್ ಹೆಲಿಪ್ಯಾಡ್ ನಿಂದ ರಸ್ತೆಯ ಮೂಲಕ ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಇನ್ನು 11 ಗಂಟೆಯಿಂದ 11:40 ರವರೆಗೂ ಹುಮ್ನಾಬಾದ್‌ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. ಇದಾದ ಬಳಿಕ ವಿಜಯಪುರ ಕುಡುಚಿಯಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಧಾನಿ ಮೋದಿ ಮೋಡಿ ಮಾಡಲಿದ್ದಾರೆ.
ಬೆಳಗಾವಿಯಿಂದ ಹೊರಟು ಸಂಜೆ 5:30 ಕ್ಕೆ ಬೆಂಗಳೂರಿನ ಹೆಚ್ಎಎಲ್ ಆಗಮಿಸಲಿರುವ ಪ್ರಧಾನಿ ಮೋದಿ, ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಲಿದ್ದಾರೆ. ಬೆಂಗಳೂರು ನಗರ ಮತದಾರರ ಮನ ಗೆಲ್ಲಲು ಸಂಜೆ 6 ಗಂಟೆಗೆ ಮತ ಬೇಟೆ ನಡೆಸಲಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಭೇಟೆ ನಡೆಸಲಿರುವ ಮೋದಿ ಮಾಗಡಿ ರೋಡ್ನ ನೈಸ್ ರೋಡ್ ಜಂಕ್ಷನ್ನಿಂದ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ಸುಮನಹಳ್ಳಿ ಜಂಕ್ಷನ್ನಲ್ಲಿ ಅಂತ್ಯವಾಗಲಿದ್ದು, ನಂತರ ರಾಜಭಾವನಕ್ಕೆ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.