ಬೆಂಗಳೂರು:ವಯೋಸಹಜ ಅನಾರೋಗ್ಯದಿಂದ ನಿನ್ನೆ ಸಂಜೆ ಲಿಂಗೈಕ್ಯರಾದ ಜ್ಞಾನಯೋಗಿ, ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಜ್ಞಾನೋತ್ಸಾಹಕ್ಕಾಗಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ' ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ವೇದಿಕೆ ಮೇಲಿದ್ದ ಚಿತ್ರಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಸುತ್ತೂರು ಶ್ರೀಗಳು ಮೋದಿ ಅವರಿಗೆ ತಾಯಿಯ ಜೊತೆಗಿದ್ದ ಚಿತ್ರದ ಉಡುಗೊರೆ ನೀಡಿದ್ದರು. ಅದನ್ನು ಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರಧಾನಿಗಳಿಗೆ ಹಸ್ತಾಂತರ ಮಾಡಲಾಗಿತ್ತು.
ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ರಾಹುಲ್ ಗಾಂಧಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಸಿದ್ದೇಶ್ವರ ಸ್ವಾಮೀಜಿ ಜಗತ್ತಿಗೆ ಒಳಿತಿನ ಮಾರ್ಗವನ್ನು ತೋರಿಸಿದ ಚೇತನ. ಅವರು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು. ಸಮಾಜಕ್ಕೆ ಅವರ ಅತ್ಯುತ್ತಮ ಸೇವೆ ಸ್ಮರಣೀಯವಾಗಿದೆ. ಅವರ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ. ಅವರ ಬೋಧನೆಗಳು ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಜೋಶಿ ಸಂತಾಪ:ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಚೇತನವನ್ನು ಮೊನ್ನೆಯಷ್ಟೇ ಕಂಡು, ಅವರ ಆರೋಗ್ಯ ವಿಚಾರಿಸಿ ಬಂದಿದ್ದೆವು. ಭಗವಂತ ಅವರಿಗೆ ಇನ್ನಷ್ಟು ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದೆ. ಆದರೆ, ಭಗವಂತನ ಇಚ್ಛೆ ನಮ್ಮೆಲ್ಲರನ್ನೂ ಮೀರಿದ್ದಾಗಿದೆ ಎಂದು ದು:ಖ ವ್ಯಕ್ತಪಡಿಸಿದರು.
ಶ್ರೀಗಳ ಸರಳ ನಡೆ-ನುಡಿ, ಕೋಟ್ಯಂತರ ಹೃದಯತಟ್ಟಿದ ಅವರ ದಿವ್ಯವಾಣಿ, ಜನರಲ್ಲಿ ಆಧ್ಯಾತ್ಮದ ಚಿರಂತನ ಬೆಳಕನ್ನು ತುಂಬಿ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಗೌರವ. ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿ ಪರಮಾತ್ಮ ಭಕ್ತರೆಲ್ಲರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ದೇವೇಗೌಡರಿಂದ ಸಂತಾಪ:ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಕಂಡ ಶ್ರೇಷ್ಠ ಸಂತರು, ಆಧ್ಯಾತ್ಮಿಕ ಪ್ರವಚನಕಾರರಾದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟು ಮಾಡಿದೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.
ಸಚಿವ ಅಶ್ವತ್ಥನಾರಾಯಣ ಕಣ್ಣೀರು:ಸಿದ್ದೇಶ್ವರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಕಣ್ಣೀರು ಹಾಕಿದ್ದಾರೆ. ಸ್ವಾಮೀಜಿಯವರು ತಮ್ಮ ನಿಷ್ಕಾಮ ಕರ್ಮದಿಂದಾಗಿ 'ನಡೆದಾಡುವ ದೇವರು' ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ತಾವು ಪಡೆದದ್ದೆಲ್ಲವನ್ನೂ ಸಮಾಜಕ್ಕೆ ಸಲ್ಲಿಸಬೇಕೆಂಬುದೇ ಅವರ ಬದುಕಿನ ಪರಮ ಧ್ಯೇಯವಾಗಿತ್ತು. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ಚೈತನ್ಯವನ್ನು ಅನುಭವಿಸಿ, ಅದನ್ನು ಬೇರೆಯವರಿಗೂ ಮನ ಮುಟ್ಟುವಂತೆ ವಿವರಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.
ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಗಲುವಿಕೆಯಿಂದ ಅತೀವ ದುಃಖವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.