ವಿಜಯಪುರ: ಸಿಂದಗಿ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ನಿತ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿವೆ. ಜೆಡಿಎಸ್ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ಮತ್ತೊಂದಡೆ ದಿ. ಎಂ.ಸಿ. ಮನಗೂಳಿ ಕುಟುಂಬಕ್ಕೆ ಶಾಕ್ ನೀಡಿದೆ.
ಸಿಂದಗಿ ಪುರಸಭೆ ಅಧ್ಯಕ್ಷರಾಗಿರುವ ಮನಗೂಳಿ ಪುತ್ರ ಶಾಂತವೀರ ಮನಗೂಳಿ ಅಧ್ಯಕ್ಷಗಿರಿಗೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರುವ ಮೂಲಕ ಬಿಗ್ ಶಾಕ್ ನೀಡಿದೆ. ಹೀಗಾಗಿ ಸಿಂದಗಿ ಪುರಸಭೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಮನಗೂಳಿ ಕುಟುಂಬ ಸಿಲುಕಿದೆ.
ವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿ ಅರ್ಜಿ:
ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕೋರಿ ಮುಖ್ಯಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಪುರಸಭೆ ಸದಸ್ಯರು, ಅಧ್ಯಕ್ಷರ ಕಾರ್ಯವೈಖರಿ ತೃಪ್ತಿ ತಂದಿಲ್ಲ. ಹೀಗಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಒಟ್ಟು 23 ಸದಸ್ಯರ ಬಲ ಹೊಂದಿರುವ ಸಿಂದಗಿ ಪುರಸಭೆಯಲ್ಲಿ 13 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಯ ಅರ್ಜಿಗೆ ಸಹಿ ಹಾಕಿದ್ದಾರೆ.
ಸದ್ಯ ಪುರಸಭೆಯಲ್ಲಿ 13 ಕಾಂಗ್ರೆಸ್ ಸದಸ್ಯರು, 3 ಬಿಜೆಪಿ ಸದಸ್ಯರು, 6 ಜೆಡಿಎಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ ನಾಲ್ವರು ಕಾಂಗ್ರೆಸ್ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಜೆಡಿಎಸ್ಗೆ ಬೆಂಬಲ ಸೂಚಿಸಿದ್ದರು. ಈ ಹಿನ್ನೆಲೆ, ಜೆಡಿಎಸ್ ಸದಸ್ಯ ಶಾಂತವೀರ ಮನಗೂಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಮನಗೂಳಿ ಪುತ್ರನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಿದ್ಧತೆ ಜೆಡಿಎಸ್ ಬೆಂಬಲಿಸಿದ್ದ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ಕಾಂಗ್ರೆಸ್ ಜಿಲ್ಲಾ ಘಟಕವು ಅವರ ಸದಸ್ಯತ್ವ ರದ್ದುಗೊಳಿಸಿತ್ತು. ಇದರಿಂದ ಪುರಸಭೆ ಸದಸ್ಯರ ಸಂಖ್ಯೆ 19ಕ್ಕೆ ಕುಸಿದಿದೆ. ಇದರಲ್ಲಿ ಓರ್ವ ಪಕ್ಷೇತರ ಸದಸ್ಯ ಕಾಂಗ್ರೆಸ್ ಸೇಪರ್ಡೆಗೊಂಡಿದ್ದಾರೆ. ಹೀಗಾಗಿ ಸದ್ಯ ಕಾಂಗ್ರೆಸ್ 8, ಬಿಜೆಪಿ 3, ಜೆಡಿಎಸ್ 6 ಹಾಗೂ ಇಬ್ಬರು ಪಕ್ಷೇತರರು ಇದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಯುವಕನ ಬರ್ಬರ ಕೊಲೆ..ಯುವತಿ ಜೊತೆಗಿನ ಪ್ರೀತಿಯೇ ಹತ್ಯೆಗೆ ಕಾರಣವಾಯ್ತಾ?
ಸದ್ಯ ಅವಿಶ್ವಾಸ ಗೊತ್ತುವಳಿ ಮಂಡನೆಗೆ 13 ಸದಸ್ಯರು ಸಹಿ ಹಾಕಿರುವ ಕಾರಣ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿಗೆ ಬಹುಮತ ಸಾಬೀತು ಪಡಿಸುವ ಕಠಿಣ ಸವಾಲು ಎದುರಾಗಿದೆ. ಇದು ಉಪಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ.