ಕರ್ನಾಟಕ

karnataka

ETV Bharat / state

ಪೂರ್ಣಗೊಳ್ಳದ ಪಠ್ಯಕ್ರಮ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೇಗಿದೆ ಸಿದ್ಧತೆ? - ಎಸ್​ಎಸ್​ಎಲ್​ಸಿ ಮಕ್ಕಳ ಪಠ್ಯಕ್ರಮ

ಕೊರೊನಾ - ಲಾಕ್​ಡೌನ್​​ ಹಿನ್ನೆಲೆ ಶಾಲಾ - ಕಾಲೇಜು ತಡವಾಗಿ ಆರಂಭಗೊಂಡ ಹಿನ್ನೆಲೆ ಎಸ್​​ಎಸ್​ಎಲ್​ಸಿ ಮಕ್ಕಳ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪಠ್ಯಬೋಧನೆ ಪೂರ್ಣಗೊಂಡಿಲ್ಲ. ಹಾಗಾಗಿ ಇದೇ ಮೇ ತಿಂಗಳೊಳಗೆ ಎಸ್ಎಸ್ಎಲ್​​ಸಿ ಮಕ್ಕಳಿಗೆ ತರಗತಿ ಕೈಗೊಂಡು ಪಠ್ಯವನ್ನು ಮುಕ್ತಾಯಗೊಳಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.‌

Preparations for SSLC Exam
ಪೂರ್ಣಗೊಳ್ಳದ ಪಠ್ಯಕ್ರಮ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೇಗಿದೆ ಸಿದ್ಧತೆ?

By

Published : Mar 4, 2021, 1:49 PM IST

ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ವಕ್ಕರಿಸಿ ಸೃಷ್ಟಿಸಿದ ಅವಾಂತರ ಎಲ್ಲರಿಗೂ ಗೊತ್ತೇ ಇದೆ. ಶಿಕ್ಷಣ ಕ್ಷೇತ್ರದ ಮೇಲೆ ಇದು ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇನ್ನೇನು ಜೂನ್​​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿದ್ದು, ಬಹುತೇಕ ಶಾಲೆಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಈ ಬಾರಿಯ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸವಾಲೇ ಆಗಿದ್ದು, ಶಿಕ್ಷಣ ಸಂಸ್ಥೆಗಳು ಬಾಕಿಯಿರುವ ಪಠ್ಯಕ್ರಮ ಮುಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ.

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೇಗಿದೆ ಸಿದ್ಧತೆ?

ಕೊರೊನಾ ಹಿನ್ನೆಲೆ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ಬಹುತೇಕ ತರಗತಿಗಳು ಆನ್​ಲೈನ್​​ನಲ್ಲೇ ನಡೆದಿದೆ. ಆನ್​ಲೈನ್​ ಶಿಕ್ಷಣದಿಣಂದ ವಂಚಿತರಾದವರು ಅದೆಷ್ಟೋ ಮಂದಿ. ಇದರಿಂದ ಬೆಂಗಳೂರು ಕೂಡ ಹೊರತಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಬಾಕಿ ಇರುವ ಪಠ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಮುಗಿಸಬೇಕಿದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ.

ಮಂಗಳೂರಿನ ಪಾಂಡೇಶ್ವರ ಓಲ್ಡ್ ಕೆಂಟ್​​ನಲ್ಲಿರುವ ಕೇರಳ ಸಮಾಜಂ ಫ್ರೌಢಶಾಲೆಯಲ್ಲಿ ಬಹುತೇಕ ಪಠ್ಯಕ್ರಮಗಳು ಪೂರ್ಣಗೊಂಡಿದ್ದು, ಶೇ.100ರಷ್ಟು ಫಲಿತಾಂಶ ಬರಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಣ್ಣೆನಗರಿ ದಾವಣಗೆರೆಯ ಶೇ. 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಕೇವಲ ಶೇ. 40 ರಿಂದ 45 ರಷ್ಟು ಪಠ್ಯಕ್ರಮ ಮುಕ್ತಾಯವಾಗಿದೆ. ಉಳಿದ ಶೇ. 60 ರಷ್ಟು ಪಠ್ಯಕ್ರಮವನ್ನು ಇದೇ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವ ಪ್ರಯತ್ನಕ್ಕೆ ಶಾಲೆಗಳು ಮುಂದಾಗಿವೆ.

ವಿಜಯಪುರದಲ್ಲಿ ವಿದ್ಯಾರ್ಥಿಗಳಿಗೆ 100 ದಿನಗಳ ಕಾಲ ಪಾಠವನ್ನು ವಿನೂತನವಾಗಿ ಬೋಧಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿದೆ. 557 ಸರ್ಕಾರಿ ಫ್ರೌಢಶಾಲೆ ಹಾಗೂ 150ಕ್ಕೂ ಹೆಚ್ಚಿರುವ ಖಾಸಗಿ ಫ್ರೌಢಶಾಲೆಯ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಯಾವ ದಿನ ಯಾವ ವಿಷಯ ಬೋಧಿಸಬೇಕು, ಕಿರು ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಯಾವಾಗ ನೀಡಬೇಕು ಎನ್ನುವ ಚಾರ್ಟ್ ಸಿದ್ಧಪಡಿಸಿದ್ದಾರೆ. ಹೀಗೆ ಒಂದಿಷ್ಟು ಪ್ರಯತ್ನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ನಡೆದಿದ್ದು, ವಿದ್ಯಾರ್ಥಿಗಳು ಸಹ ಶಿಕ್ಷಕರ ಜತೆ ಹೆಜ್ಜೆ ಹಾಕುತ್ತಿದ್ದಾರೆ.

ಇರುವ ಕಡಿಮೆ ಅವಧಿಯಲ್ಲಿ ಬಾಕಿ ಇರುವ ಪಠ್ಯಕ್ರಮ ಮುಗಿಸಲು ಶಿಕ್ಷಣ ಸಂಸ್ಥೆಗಳು ಶತ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ವಿದ್ಯಾರ್ಥಿ ಸಮೂಹವೂ ಸಾಥ್​ ನೀಡಿದೆ.

ABOUT THE AUTHOR

...view details