ವಿಜಯಪುರ: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಿಶು ಸಹಿತ ಗರ್ಭಿಣಿ ಮೃತಪಟ್ಟಿರುವ ಘಟನೆ ನಡೆದಿದೆ. ಭಾಗ್ಯಶ್ರೀ ರಾವುತಪ್ಪ ಪಾರಣ್ಣವರ (20) ಮೃತ ಗರ್ಭಿಣಿ. ಘಟನೆಯಲ್ಲಿ ಆಂಬ್ಯುಲೆನ್ಸ್ ಚಾಲಕ ಮತ್ತು ಸಿಬ್ಬಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮೊದಲು, ಶುಕ್ರವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಭಾಗ್ಯಶ್ರೀ ಅವರನ್ನು ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ಇಂದು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಮಾರ್ಗಮಧ್ಯೆ ಹೂವಿನ ಹಿಪ್ಪರಗಿ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಆಂಬ್ಯುಲೆನ್ಸ್ ಡಿಕ್ಕಿಯಾದ ಪರಿಣಾಮ ತಾಯಿ ಮತ್ತು ಗರ್ಭದಲ್ಲಿನ ಶಿಶು ಕೊನೆಯುಸಿರೆಳೆದಿದ್ದಾರೆ.