ಕರ್ನಾಟಕ

karnataka

ETV Bharat / state

ಹೋಳಿ ಹುಣ್ಣಿಮೆಗೂ ಮುನ್ನ ವಿಜಯಪುರದಲ್ಲಿ ವಿಶಿಷ್ಟ ಆಚರಣೆಯ ಪರಡಿ ಹಬ್ಬ - ಹೋಳಿ ಹುಣ್ಣಿಮೆಗೂ ಮುನ್ನ ವಿಜಯಪುರದಲ್ಲಿ ವಿಶಿಷ್ಟ ಆಚರಣೆ ಪರಡಿ ಹಬ್ಬ

ಉತ್ತರ ಕರ್ನಾಟಕದಲ್ಲಿ ತಾಯಿ ಯಲ್ಲವ್ವ ಬಹುತೇಕರ ಆರಾಧ್ಯ ದೈವ. ಮನೆಯಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸಲಿ ಎಂದು ಆಸ್ತಿಕರು ತಾಯಿ ಯಲ್ಲಮ್ಮನಿಗೆ ವಿಶೇಷ ಪೂಜೆ ಮಾಡುತ್ತಾರೆ. ಈ ಹೋಳಿ ಹುಣ್ಣಿಮೆಯ ದಿನ ಪರಡಿ(ಪಡ್ಡಲಗಿ) ತುಂಬುವ ವಿಶಿಷ್ಟ ಪದ್ಧತಿ ನಡೆಯುತ್ತದೆ.

ವಿಶಿಷ್ಟ ಆಚರಣೆಯ ಪರಡಿ ಹಬ್ಬ
ವಿಶಿಷ್ಟ ಆಚರಣೆಯ ಪರಡಿ ಹಬ್ಬ

By

Published : Mar 17, 2022, 6:08 PM IST

ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆ ಹಲವು ಸಂಸ್ಕೃತಿ, ಪರಂಪರೆ ಮತ್ತು ಪುರಾತನ ಆಚರಣೆ ಗಳಿಗೆ ಹೆಸರುವಾಸಿ. ಅದರಲ್ಲೂ ಹೋಳಿ ಹಬ್ಬ ಬಂತೆಂದರೆ ಸಾಕು, ಈ ಭಾಗದಲ್ಲಿ ಜಾತ್ಯತೀತವಾಗಿ ಜನ ಸಾಮರಸ್ಯದಿಂದ ಆಚರಣೆಯಲ್ಲಿ ತೊಡಗುತ್ತಾರೆ.

ಹೋಳಿ ಹುಣ್ಣಿಮೆಯ ದಿನ ಕಾಮದಹನಕ್ಕೆ ಕಾಮಣ್ಣನ ಮೂರ್ತಿರೂಪ ಸಿದ್ಧಪಡಿಸಿ ದಹಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಹೊಸ ವರ್ಷ ಯುಗಾದಿಯ ಸ್ವಾಗತಕ್ಕಾಗಿ ಹೋಳಿ ಹುಣ್ಣಿಮೆ ಪೂರ್ವ ತಯಾರಿ ಎಂದರೆ ತಪ್ಪಾಗಲಾರದು.


ಹೋಳಿ ಹುಣ್ಣಿಮೆಯ ದಿನ ಅನಾದಿ ಕಾಲದಿಂದಲೂ ನಡೆದುಬಂದಿರುವ ವಿಶಿಷ್ಟ ಆಚರಣೆಯೊಂದು ಇನ್ನೂ ಚಾಲ್ತಿಯಲ್ಲಿದೆ. ಉತ್ತರ ಕರ್ನಾಟಕದಲ್ಲಿ ತಾಯಿ ಯಲ್ಲವ್ವ ಬಹುತೇಕರ ಆರಾಧ್ಯ ದೈವ. ಮನೆಯಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸಲಿ ಎಂದು ಆಸ್ತಿಕರು ತಾಯಿ ಯಲ್ಲಮ್ಮನಿಗೆ ವಿಶೇಷ ಪೂಜೆ ಮಾಡುತ್ತಾರೆ. ಈ ಹೋಳಿ ಹುಣ್ಣಿಮೆಯ ದಿನ ಪರಡಿ(ಪಡ್ಡಲಗಿ) ತುಂಬುವ ವಿಶಿಷ್ಟ ಪದ್ಧತಿ ನಡೆಯುತ್ತದೆ.

ಹೋಳಿ ಹುಣ್ಣಿಮೆ ದಿನ ಜೋಗಮ್ಮಳನ್ನು ಅಂದರೆ ತಾಯಿ ಯಲ್ಲಮ್ಮನ ಆರಾಧಕಿಯನ್ನು ಮನೆಗೆ ಕರೆದು ಭಕ್ತರು ಪರಡಿಯನ್ನು ತುಂಬಿ ವಿಶೇಷ ಪೂಜೆ ಮಾಡುತ್ತಾರೆ. ಈ ಆಚರಣೆಗೂ ಮುನ್ನಾ ದಿನ ಮನೆ ಸ್ವಚ್ಛಗೊಳಿಸಿ ಹಾಸಿಗೆ ಹೊದಿಕೆಗಳನ್ನು ತೊಳೆದು ಸ್ವಚ್ಛತೆ ಕಾಪಾಡುತ್ತಾರೆ. ಹುಣ್ಣಿಮೆಯ ದಿನ ನಸುಕಿನ ಜಾವ ಬೆಳಗ್ಗೆ ಬೇಗನೇ ಎದ್ದು ಯಾವುದೇ ರೀತಿ ಮೈಲಿಗೆ ಆಗದಂತೆ ಎಡೆ ತಯಾರಿಸುತ್ತಾರೆ. ಹುರುಣದ ಹೋಳಿಗೆ, ಕಡಬು, ಅನ್ನ ತರಹೇವಾರಿ ಪಲ್ಯ, ಕುರುಕಲು ತಿಂಡಿಗಳು ಸೇರಿದಂತೆ ನಾನಾ ಖಾದ್ಯಗಳನ್ನು ಸಂಭ್ರಮದಿಂದ ತಯಾರಿಸುತ್ತಾರೆ.

ಎಲ್ಲಾ ಅಡುಗೆಗಳು ತಯಾರಾದ ನಂತರ ಜೋಗಮ್ಮಳನ್ನು ಮನೆಗೆ ಕರೆಯಿಸಿ ಅವರು ತಂದಿರುವ ಕಿರಿದಾದ ಪರಡಿ ಅಂದರೆ ಬುಟ್ಟಿಯಲ್ಲಿ, ದೇವರ ನೈವೇದ್ಯಕ್ಕಾಗಿ ತಯಾರಿಸಿದ ಆಹಾರಗಳನ್ನು ಹಾಕುತ್ತಾರೆ. ಇದರ ಜೊತೆಯಲ್ಲಿ ನಾನಾ ತರಕಾರಿಗಳನ್ನಿಟ್ಟು ಆರತಿ ಬೆಳಗುತ್ತಾರೆ. ‌ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸುವರು.

ಈ ಸಂದರ್ಭದಲ್ಲಿ ಮನೆಗೆ ಬಂದಿರುವ ಜೋಗಮ್ಮ ಮಡಿಯಿಂದ ಸಂಗ್ರಹಿಸಲಾದ ನೀರಿನಲ್ಲಿ ಬೇವಿನ ತಪ್ಪಲನ್ನು ಅದ್ದಿ ಮನೆಯವರ ಮೇಲೆ ಸಿಂಪಡಿಸುತ್ತಾ ಶುಭ ಕೋರುತ್ತಾರೆ. ಈ ಕುಟುಂಬದವರಿಗೆ ಒಳಿತಾಗಲಿ ಎಂದು ಆಶೀರ್ವದಿಸುತ್ತಾರೆ. ಬಳಿಕ ಮನೆಮಂದಿಯೆಲ್ಲಾ ಸೇರಿ ಜೋಗಮ್ಮಳ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಅಲ್ಲದೆ ತಾಯಿ ಯಲ್ಲಮ್ಮಳಿಗೆ ನೈವೇದ್ಯಕ್ಕಾಗಿ ಮಾಡಲಾದ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿದ ನಂತರ ಜೋಗಮ್ಮಳಿಗೆ ನೀಡಿ ಕೃತಾರ್ಥರಾಗುತ್ತಾರೆ.

ಈ ಸಂದರ್ಭದಲ್ಲಿ ಜೋಗಮ್ಮ ಪರಡಿ ತುಂಬಿಸಿಕೊಂಡು ಮನೆಯಿಂದ ಹೊರ ಹೋಗುವಾಗ ಆ ಮನೆಯಲ್ಲಿ ಹವಳ, ಮುತ್ತು ಬಿದ್ದಿವೆ ಬಳಿದುಕೊಳ್ಳಿ ಎಂದು ಆಶೀರ್ವದಿಸಿ ತೆರಳುತ್ತಾರೆ. ಈ ಆಚರಣೆ ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವುದು ವಿಶೇಷ.

For All Latest Updates

TAGGED:

ABOUT THE AUTHOR

...view details