ವಿಜಯಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ತಮ್ಮ ಸದಸ್ಯರನ್ನು ಹೈಜಾಕ್ ಮಾಡುವ ಭಯದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಸದಸ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಂದ ಪತ್ರ ರವಾನಿಸಲಾಗಿದೆ. ಶಾಸಕರಾದ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್, ಪರಿಷತ್ ಸದಸ್ಯರಾದ ಸುನೀಲ್‌ಗೌಡ ಪಾಟೀಲ್, ಪ್ರಕಾಶ ರಾಠೋಡ್ ಅವರಿಂದ ಪತ್ರಕ್ಕೆ ಸಹಿ ಹಾಕಲಾಗಿದೆ.
ಭದ್ರತೆ ನೀಡುವ ಕುರಿತಾಗಿ ಮನವಿ ಪತ್ರ ಕೈ ಸದಸ್ಯರಿಗೆ ಜೀವ ಭಯವಿದೆ, ಚುನಾವಣೆ ಸಮಯದಲ್ಲಿ ಅವರ ಮೇಲೆ ಹಲ್ಲೆಯಾಗುವ ಸಾಧ್ಯತೆ ಇದೆ. ಸದಸ್ಯರು ತಂಗಿರುವ ಖಾಸಗಿ ಹೋಟೆಲ್ನಿಂದ ಚುನಾವಣಾ ಸ್ಥಳಕ್ಕೆ ತೆರಳಲು ಅಲ್ಲಿಂದ ವಾಪಸ್ ಹೋಟೆಲ್ಗೆ ಮರಳುವವರೆಗೂ ಭದ್ರತೆ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಡಿಸಿ ಹಾಗೂ ಎಸ್ಪಿ ಅವರಿಗೂ ಮನವಿ ಪತ್ರವನ್ನು ಕೈ ಶಾಸಕರು ಹಾಗೂ ಪರಿಷತ್ ಸದಸ್ಯರು ರವಾನಿಸಿದ್ದಾರೆ.
ಗುಪ್ತ ಸಭೆ :ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕೆಂದು ಮಾಜಿ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ 15 ಕಾಂಗ್ರೆಸ್ ಸದಸ್ಯರು, ನಾಲ್ವರು ಬಿಜೆಪಿ, ಇಬ್ಬರು ಜೆಡಿಎಸ್ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಸಭೆಯಲ್ಲಿ ಹಾಜರಿದ್ದರು ಎನ್ನುವ ಮಾತುಗಳು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈವರೆಗೆ ಕಾಂಗ್ರೆಸ್‌ನಿಂದ ಒಬ್ಬರು ಹಾಗೂ ಬಿಜೆಪಿಯಿಂದ ಮತ್ತೊಬ್ಬ ಸದಸ್ಯ ನಾಮಪತ್ರ ಸಲ್ಲಿಸಿದ್ದಾರೆ.