ವಿಜಯಪುರ:ಅಪಘಾತ, ಅಪರಾಧ ಪ್ರಕರಣಗಳನ್ನು ತಡೆಯಲು ಜಿಲ್ಲಾ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ಎಸ್ಪಿ ಆನಂದ ಕುಮಾರ ಹೊಸ ಹೆಜ್ಜೆ ಇಟ್ಟಿದ್ದು, ವಿಜಯಪುರ ನಗರದಲ್ಲಿಯೇ 100ಕ್ಕಿಂತ ಹೆಚ್ಚು ನೂತನ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ವಿಜಯಪುರ ನಗರದಲ್ಲಿ 16 ಕಡೆಗಳಲ್ಲಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಮೇಲೆ ಮತ್ತಷ್ಟು ಹದ್ದಿನ ಕಣ್ಣಿಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದಲ್ಲಿ ಸವಾರರು ಸಂಚಾರ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ಹೆಜ್ಜೆ ಇಡುಬೇಕಾಗುತ್ತದೆ. ಪ್ರತಿಯೊಂದು ಚಲನವಲನದ ದೃಶ್ಯಗಳು ದಿನದ 24 ಗಂಟೆಯೂ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದೆ. ನಗರದಲ್ಲಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ಗಾಂಧಿ ಚೌಕ್ ಪೊಲೀಸ್ ಠಾಣೆಯ ಮೇಲಿನ ಕೊಠಡಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಯುನಿಟ್ನಲ್ಲಿ ಸ್ಟೋರ್ ಆಗುತ್ತದೆ.
5 ಕೋಟಿ 30 ಲಕ್ಷ ರೂ. ವೆಚ್ಚ:ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಕಂಟ್ರೋಲ್ ಯುನಿಟ್ನಿಂದಲೇ ನಿರ್ದೇಶನ ಕೊಡಲು ಸಾಧ್ಯವಾಗುತ್ತದೆ. ಜೊತೆಗೆ ರೂಲ್ಸ್ ಬ್ರೇಕ್ ಮಾಡಿರೋ ವಾಹನದ ನಂಬರ್ ಸುಲಭವಾಗಿ ಸರ್ಚ್ ಮಾಡಬಹುದಾಗಿದೆ. ಎಷ್ಟು ಬಾರಿ ವಾಹನ ಓಡಾಟ ಮಾಡಿದೆ ಅನ್ನೋದು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಇನ್ನೂ ಕೊಲೆ ಪ್ರಕರಣ, ದರೋಡೆ, ಇತರೆ ಅಕ್ರಮ ಚಟುವಟಿಕೆ ತಡೆಯಲು ಹಾಗೂ ಆರೋಪಿಗಳ ಪತ್ತೆಗೆ ಸಿಸಿಟಿವಿ ಕ್ಯಾಮೆರಾಗಳು ಸಹಾಯಕವಾಗುತ್ತದೆ. ವಿಜಯಪುರ ಮಹಾನಗರ ಪಾಲಿಕೆಯ ಯೋಜನೆಯಡಿ 5 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಪಿ.ಟು.ಜಡ್ ಎನ್ನುವ ವಿಶಿಷ್ಟ ತಂತ್ರಜ್ಞಾನದ 20 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದರೆ, ನಂಬರ್ ಪ್ಲೇಟ್ ರಿಕಾರ್ಡ್ ಮಾಡಲು ಸುಲಭವಾಗುತ್ತದೆ.