ವಿಜಯಪುರ: ನಿವೃತ್ತ ಕೆಎಎಸ್ ಅಧಿಕಾರಿ ಕೆ. ಶಿವರಾಂ ನಟಿಸಿರುವ 'ಬಾನಲ್ಲೆ ಮಧುಚಂದ್ರಕೆ' ಸಿನಿಮಾ ನೋಡಿದ್ದರೆ, ಅದರಲ್ಲಿ ಮೋಸ ಮಾಡಿದ ಪ್ರೇಯಸಿಯನ್ನು ಹನಿಮೂನ್ ನೆಪದಲ್ಲಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡುತ್ತಾನೆ.
ಆದರೆ, ಇದೇ ರೀತಿಯ ಸಿನಿಮೀಯ ನೈಜ ಘಟನೆಯೊಂದು ಬರೋಬ್ಬರಿ 10 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಬಸವನಾಡಿನಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಹತ್ಯೆ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಏನಿದು ಘಟನೆ?:ವಿಜಯಪುರ ನಗರದ ಬಸವರಾಜ ಮಮದಾಪುರ ಇವರ ಪುತ್ರಿ ಪ್ರಿಯಾಂಕಾ ಎಂಬುವರನ್ನು ತಮ್ಮ ಸಂಬಂಧಿಕರೇ ಆದ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ ಎಂಬವರೊಂದಿಗೆ 2008 ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.
ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇ ಪದೆ ತವರು ಮನೆಗೆ ಪ್ರಿಯಾಂಕಾ ಬರುತ್ತಿದ್ದರು. ಇತ್ತ ಕಡೆ ಪೋಷಕರು ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿದ್ದರು. 2011ರ ವರೆಗೂ ಹೀಗೆಯೇ ಮುಂದುವರೆದಿತ್ತು.
ಒಂದು ದಿನ ಪ್ರಿಯಾಂಕಾ ತಮಗೆ ಗಂಡನ ಜೊತೆಗೆ ಸಂಸಾರ ಮಾಡಲು ಇಷ್ಟವಿಲ್ಲ, ತಾವು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಪೋಷಕರು ಬುದ್ಧಿವಾದ ಹೇಳಿ, ಮತ್ತೆ ಗಂಡನ ಮನೆಗೆ ಬಿಟ್ಟು ಬಂದಿದ್ದಾರೆ.
ಓಡಿಹೋಗಿದ್ದಾಳೆಂದು ಸುಮ್ಮನಾಗಿದ್ದ ಪೋಷಕರು: ಈ ಪ್ರೀತಿ ವಿಚಾರ ಗಂಡನ ಮನೆಯವರಿಗೆ ಗೊತ್ತಾಗಿ ಖತರ್ನಾಕ್ ಐಡಿಯಾ ಮಾಡಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಅಂಗಡಿಗೆ ಹೋದವಳು ವಾಪಸ್ ಮನೆಗೆ ಬಂದಿಲ್ಲ ಎಂದು ಪ್ರಿಯಾಂಕಾ ಪೋಷಕರಿಗೆ ಗಂಡನ ಮನೆಯವರು ಕರೆಮಾಡಿ ಹೇಳಿದ್ದಾರೆ. ಬಹುಶಃ ಆಕೆ ಪ್ರಿಯಕರನ ಜತೆ ಓಡಿ ಹೋಗಿರಬಹುದು ಎಂದು ಅವರು ಸುಮ್ಮನಾಗಿದ್ದಾರೆ.
ಬಾರ್ನಲ್ಲಿ ಬಾಯ್ಬಿಟ್ಟ ಆರೋಪಿ: ಪ್ರಿಯಾಂಕಾ ಪಾಟೀಲ ಸುಮಾರು 10 ವರ್ಷಗಳ ಕಾಲ ನಾಪತ್ತೆಯಾಗಿದ್ದಾರೆ ಅಂತಲೇ ಬಿಂಬಿಸಲಾಗಿತ್ತು. ಒಂದು ದಿನ ಪ್ರಿಯಾಂಕಾ ಪತಿ ಹುಚ್ಚಪ್ಪಗೌಡ ಬಾರ್ನಲ್ಲಿ ಕುಳಿತು ಕುಡಿಯುವಾಗ ತನ್ನ ಪತ್ನಿಯನ್ನು ಕೊಂದಿರುವುದಾಗಿ ಮಾತನಾಡಿಕೊಂಡಿದ್ದಾನೆ. ಈ ವಿಷಯ ಪೊಲೀಸರ ಕಿವಿಗೆ ಬಿದ್ದಿದೆ.
ತಕ್ಷಣ ಅಲರ್ಟ್ ಆದ ಪೊಲೀಸರು ಹುಚ್ಚಪ್ಪಗೌಡನ ಪತ್ನಿ ಪ್ರಿಯಾಂಕಾ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆಕೆ ಹತ್ತು ವರ್ಷದ ಹಿಂದೆ ನಾಪತ್ತೆ ಆಗಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ಪ್ರಿಯಾಂಕಾ ಪೋಷಕರನ್ನು ವಿಚಾರಣೆ ನಡೆಸಿ ಅವರಿಂದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.