ವಿಜಯಪುರ:ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದ ಯುವಕನ ವಿರುದ್ಧ ತಾಳಿಕೋಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ಬಂಧಿತ ಯುವಕ.
ಇನ್ಸಸ್ಟಾಗ್ರಾಂನಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಸ್ಟೇಟಸ್ ಹಾಕಿಕೊಂಡಿದ್ದನು. ಇದನ್ನು ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ತಾಳಿಕೋಟೆ ಪೊಲೀಸರು ಪಾಕ್ ಪರ ಸ್ಟೇಟಸ್ ಹಾಕಿದ್ದ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹದ್ದೇ ಪ್ರಕರಣ:ಮುದ್ದೇಬಿಹಾಳದಲ್ಲಿ ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಾಲೂಕಿನ ನಾಲತವಾಡ ಪಟ್ಟಣದ ಕಾನಬಾವಿ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಆತನನ್ನು ವಿಜಯಪುರದ ದರ್ಗಾ ಜೈಲಿಗಟ್ಟಿರುವ ಪ್ರಕರಣ ಸೋಮವಾರ ನಡೆದಿದೆ.
ಆರೋಪಿ ವೀರೇಶನು ಕಾಂಗ್ರೆಸ್‌ನ ಶಾಸಕ ಅಪ್ಪಾಜಿ ನಾಡಗೌಡರ ಹೆಸರಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಪೋಸ್ಟ್ ಶೇರ್ ಮಾಡಿದ್ದ. ಇದು ಅಲ್ಲಿನ ಸ್ಥಳೀಯರಿಗೆ ಗೊತ್ತಾಗಿ ಪೊಲೀಸ್ ಔಟ್ಪೋಸ್ಟ್ಗೆ ಕರೆತಂದು ಪೊಲೀಸರಿಗೆ ಒಪ್ಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ವಿಚಾರಣೆ ನಡೆಸಿದ ಮೇಲೆ ವೀರೇಶ ತಪ್ಪು ಮಾಡಿರುವುದು ಗೊತ್ತಾಗಿದೆ. ಅಲ್ಲಿಂದ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು.