ವಿಜಯಪುರ: ನನ್ನ ಮಗನ ಮೇಲೆ ಆರೋಪಗಳಿದ್ದರೇ ಅವನನ್ನು ವಿಚಾರಣೆ ಮಾಡುವುದನ್ನು ಬಿಟ್ಟು ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೊಪಿಸಿ, ಮಹಿಳೆಯೊಬ್ಬರು ಇಂಡಿ ಪೊಲೀಸ್ ಠಾಣೆ ಪೂಲೀಸರ ವಿರುದ್ಧ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ವಿಚಾರಣೆ ಹೆಸರಿನಲ್ಲಿ ಪೊಲೀಸರಿಂದ ದೌರ್ಜನ್ಯ ಆರೋಪ: ಡಿಸಿಗೆ ಪತ್ರ ಬರೆದ ಕುಟುಂಬ
ಪೊಲೀಸರು ರಾತ್ರಿ ವೇಳೆ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ವಿಚಾರಣೆಗೆ ಮಗ ಹಾಜರಾಗಿದ್ದರೂ ಮನೆಗೆ ಬಂದು ಹೆಣ್ಣು ಮಕ್ಕಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಮೆಹಮೂನ್ ಮಕಾನದಾರ, ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ಇಂಡಿಯ ನಿವಾಸಿ ಮೆಹಮೂನ್ ರಜಾಕಸಾಬ್ ಮಕಾನದಾರ್ ಪೊಲೀಸರ ಕಿರುಕುಳದಿಂದ ನೊಂದಿರುವ ಮಹಿಳೆ. ಈಕೆಯ ಪುತ್ರ ಸೈನಾಫ್ ಮಕಾನದಾರ ಮೇಲೆ ಇಂಡಿ ಠಾಣೆಯಲ್ಲಿ ಹಲವು ಆರೋಪಗಳಿವೆ. ಆದರೆ, ವಿಚಾರಣೆ ಹೆಸರಿನಲ್ಲಿ ಇಂಡಿ ಠಾಣೆಯ ಕ್ರೈಮ್ ಪಿಎಸ್‌ಐ ಹಾಗೂ ಇನ್ನಿಬ್ಬರು ಕಾನ್ಸ್‌ಟೇಬಲ್‌ಗಳು ರಾತ್ರಿ ಸಮಯದಲ್ಲಿ ಮನೆಗೆ ಬಂದು ಇಲ್ಲ ಸಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಇಂಡಿ ಠಾಣೆ ಪೊಲೀಸರ ವಿರುದ್ಧ ದೂರುತ್ತಿದ್ದಾರೆ.
ಮಗನ ಮೇಲೆ ಆರೋಪಗಳು ಸಾಬೀತಾದರೆ, ಅವನ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿ. ಆದರೆ, ನಮ್ಮ ಕುಟುಂಬದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು. ದೌರ್ಜನ್ಯ ಎಸಗುವುದು, ಹೆಣ್ಣು ಮಕ್ಕಳಿಗೆ, ವಿಧವೆ ಹಾಗೂ ವಯೋವೃದ್ಧರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಸ್ಪಿ ಅನುಪಮ್ ಅಗರವಾಲ್ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ಗೆ ಪತ್ರದ ಮೂಲಕ ದೂರು ನೀಡಿದ್ದಾರೆ.