ವಿಜಯಪುರ: ಜಿಲ್ಲೆಯ ಬಬಲೇಶ್ವರ ತಹಶೀಲ್ದಾರ್ ಕಚೇರಿ ಬಳಿ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಜಗಳ ತಾರಕಕ್ಕೇರಿತ್ತು. ಕಾಂಗ್ರೆಸ್ ಎಂಎಲ್ಸಿ ಸುನೀಲಗೌಡ ಪಾಟೀಲ್ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ್ ನಡುವೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಏಕವಚನ ಬಳಕೆಯ ಜಗಳ ನಡೆದಿತ್ತು.
ಗುರುವಾರ ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಜುಗೌಡ ಪಾಟೀಲ್, ಜಾತಿ ಪ್ರಮಾಣ ಪತ್ರವನ್ನು ತಳವಾರ ಪರಿವಾರದ ಜನರಿಗೆ ಕೊಡಿಸಲು ಹೋದಾಗ ಎಂಎಲ್ಸಿ ಅವರು ಬಂದು ಪ್ರೋಟೋ ಕಾಲ ಪ್ರಕಾರ ನಡೆದುಕೊಳ್ಳಿ ಎಂದರು. ನಾನೊಬ್ಬ ನಿಗಮ ಮಂಡಳಿ ಅಧ್ಯಕ್ಷನೆಂದು ಗೊತ್ತಿದ್ದರೂ ನನ್ನ ಬದಲಿಗೆ ತಮ್ಮ ಬೆಂಬಲಿಗರನ್ನು ಒಳಗೆ ಕರೆದುಕೊಂಡಿದ್ದಾರೆ. ಶಾಸಕರು ಈ ಪ್ರಮಾಣ ಪತ್ರ ವಿತರಿಸುತ್ತಾರೆ, ಬೇರೆಯವರು ನೀಡುವ ಹಾಗಿಲ್ಲ ಎಂದು ಹೇಳಿದ್ದಾರೆ.
ಪಿಚ್ಚರ್ ಅಭಿ ಬಾಕಿ ಹೈ ಎಂದ ಬಿಜೆಪಿ ಮುಖಂಡ ಅಲ್ಲದೇ ನಂತರ ಹೊರಗಡೆ ನನ್ನ ವಿರುದ್ಧ ಏಕವಚನ ಪದ ಪ್ರಯೋಗ ಮಾಡಿ, ಜಗಳ ತೆಗೆದಿದ್ದಾರೆ ಎಂದು ಆರೋಪಿಸಿದರು. ಇದನ್ನು ಜನರೆಲ್ಲ ನೋಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿ ಈ ಘಟನೆ ಬಗ್ಗೆ ಕಾನೂನು ಹೋರಾಟ ಮಾಡುವ ಚಿಂತನೆ ನಡೆಸುವುದಾಗಿ ವಿಜುಗೌಡ ಪಾಟೀಲ್ ತಿಳಿಸಿದರು.
ಇದನ್ನೂ ಓದಿ:ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ..: ಡಿಸಿ ಎದುರೇ ಕೈ-ಕಮಲ ನಾಯಕರ ಕಿತ್ತಾಟ
ಅಭಿ ಪಿಚ್ಚರ್ ಬಾಕಿ ಹೈ: ಇವರು ಹೆದರಿಸಿ ಬಬಲೇಶ್ವರ ಕ್ಷೇತ್ರದೊಳಗೆ ಬಾರದಂತೆ ನೋಡಿಕೊಳ್ಳಲು ಆಗುವುದಿಲ್ಲ. ನಾನು ಮೂರು ಬಾರಿ ಈ ಕ್ಷೇತ್ರದಲ್ಲಿ ಸೋತಿರಬಹುದು, ಆದರೆ ಜನರ ಹೃದಯದಲ್ಲಿದ್ದೇನೆ. ಬಬಲೇಶ್ವರ ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಮುಂದಿನ ದಿನದಲ್ಲಿ ಬಿಡುಗಡೆ ಮಾಡುವೆ ಎನ್ನುವ ಮೂಲಕ ಅಭಿ ಪಿಚ್ಚರ್ ಬಾಕಿ ಹೈ ಎಂದರು.