ವಿಜಯಪುರ: ಶನಿವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪನ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಐತಿಹಾಸಿಕ ಸ್ಮಾರಕಗಳ ತವರೂರಿನಲ್ಲಿ ಈ ಘಟನೆ ನಡೆದಿರುವುದು ಅಧಿಕಾರಿ ವರ್ಗದಲ್ಲೂ ಸಹ ಆತಂಕ ಮೂಡಿಸಿದೆ.
ಭೂಮಿ ಕಂಪಿಸಿದ ಅನುಭವ ಬಿಚ್ಚಿಟ್ಟ ಸ್ಥಳೀಯರು ರಿಕ್ಟರ್ ಮಾಪಕದಲ್ಲಿ ಕಡಿಮೆ ತೀವ್ರತೆ ಇದ್ದರೂ ಸಹ ಐತಿಹಾಸಿಕ ನಗರ ಎನ್ನುವ ಕಾರಣಕ್ಕೆ ವಿಜ್ಞಾನಿಗಳು, ಭೂ ಮಾಪನ ಕೇಂದ್ರದ ಅಧಿಕಾರಿಗಳು ತಲೆಕೆಡಿಸಿಕೊಳ್ಳುವಂತಾಗಿದೆ. ಕಳೆದ ರಾತ್ರಿ 11.47 ನಿಮಿಷದಿಂದ 11.57ರವರೆಗೆ ಭೂಮಿ ಕಂಪಿಸಿದ್ದು, ಶಬ್ದ ಕೇಳಿ ನಿದ್ದೆಯಲ್ಲಿದ್ದ ಜನರು ತಕ್ಷಣ ಎದ್ದು ಮನೆಯಿಂದ ಹೊರಬಂದಿದ್ದಾರೆ.
ಕಳೆದ 37 ವರ್ಷಗಳ ನಂತರ ನಗರದಲ್ಲಿ ಮೊದಲ ಬಾರಿ ಭೂಕಂಪನದ ಅನುಭವ ಆಗಿದೆ ಎಂದು ಕೆಲವರು ಭೂಕಂಪನದ ಅನುಭವ ಹಂಚಿಕೊಂಡರು.
ಇದನ್ನೂ ಓದಿ:ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಅನುಭವ... ಮನೆಯಿಂದ ಹೊರಗೆ ಬಂದ ಜನರು!
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೂಗರ್ಭ ವಿಜ್ಞಾನಿಗಳನ್ನು ವಿಜಯಪುರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿನ ಪರಿಸ್ಥಿತಿ ಅವಲೋಕಿಸಿ ವರದಿ ನೀಡಲು ಸೂಚಿಸಿದ್ದಾರೆ. ಜಿಲ್ಲಾಡಳಿತವೂ ಸಹ ಭೂಕಂಪನದ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚುತ್ತಿದೆ. ಮಹಾರಾಷ್ಟ್ರ ಕೊಲ್ದಾಪುರ ರಿಕ್ಟರ್ ಮಾಪಕದಲ್ಲಿ 3.9ಮೀಟರನಷ್ಟು ತೀವ್ರತೆ ದಾಖಲಾಗಿದೆ. ಆಲಮಟ್ಟಿ ಜಲಾಶಯದಲ್ಲಿರುವ ರಿಕ್ಟರ್ ಮಾಪನದಲ್ಲಿ 2.4 ಮೀಟರ್ ದಾಖಲಾಗಿದ್ದು ಯಾರು ಹೆದರುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.
ಕಳೆದ ಹಲವು ತಿಂಗಳಿಂದ ಮನಗೂಳಿ, ಗೊಳಸಂಗಿ, ಕೂಡಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾದಾಗ ಕಾಟಾಚಾರಕ್ಕೆ ಎಂಬಂತೆ ಭೂಗರ್ಭ ಇಲಾಖೆ ಅಧಿಕಾರಿಗಳು ಆಗಮಿಸಿ ಎಲ್ಲ ಸರಿಯಿದೆ ಎಂದು ಸಮಜಾಯಿಷಿ ನೀಡಿ ಹೋಗುತ್ತಿದ್ದರು. ಆದರೀಗ ವಿಜಯಪುರ ಸಿಟಿಯಲ್ಲೇ ಭೂಕಂಪನವಾಗಿದೆ ಸರ್ಕಾರ ಈಗಾದರೂ ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕು ಅಂತಾರೆ ಸ್ಥಳೀಯರು.