ವಿಜಯಪುರ :ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕ್ರಮ ತೆಗೆದುಕೊಳ್ಳುತ್ತಿವೆ. ಆದರೆ, ಈ ಎಲ್ಲಾ ಕ್ರಮಗಳಿಗೂ ಜನತೆ ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಇದೀಗ ವಿಜಯಪುರದಲ್ಲಿ ಸೋಂಕಿತರ ಮನೆ ಸಮೀಪದಲ್ಲಿಯೇ ವಾರದ ಸಂತೆ ನಡೆದಿರುವ ಘಟನೆ ವರದಿಯಾಗಿದೆ. ಇದನ್ನು ತಡೆಯಬೇಕಾದ ಪೊಲೀಸರು ಸಹ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಪೊಲೀಸ್ ಠಾಣೆ ಸಹ ಸೀಲ್ಡೌನ್ ಆಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಜಾಮಿಯಾ ಮಸೀದಿ ಬಳಿಯ ನಾಗೂರ ಹಾಗೂ ತೆಲಗಿ ರಸ್ತೆಯಲ್ಲಿ ವಾರದ ಸಂತೆಗೆ ವ್ಯಾಪಾರಸ್ಥರು ಮುಂದಾಗಿದ್ದಾರೆ. ಜನರು ಸಹ ಸಂತೆಯಲ್ಲಿ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿರುವುದು ಪತ್ತೆಯಾಗಿದೆ.
ಪುರಸಭೆ ಆದೇಶಕ್ಕೂ ಕಿಮ್ಮತ್ತಿಲ್ಲ.. ಸೀಲ್ಡೌನ್ ಪ್ರದೇಶದ ಬಳಿಯೇ ವಾರದ ಸಂತೆ ಜುಲೈ 2ರಂದು ನಾಗೂರ ರಸ್ತೆಯಲ್ಲಿ ಓರ್ವ ಸೋಂಕಿತ ಪತ್ತೆಯಾಗಿದ್ದಾನೆ. ಕೂಗಳತೆಯ ದೂರವೇ ಸೀಲ್ಡೌನ್ ಪ್ರದೇಶವಿದೆ. ಪ್ರಥಮ-ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ವರದಿ ಇನ್ನೂ ಬರಬೇಕಾಗಿದೆ. ಅಷ್ಟರಲ್ಲಿ ಅದೇ ಭಾಗದಲ್ಲಿ ವಾರದ ಸಂತೆ ನಡೆದಿರುವುದು ಆತಂಕ ಮೂಡಿಸಿದೆ. ಜುಲೈ 4ರಂದು 4 ಪ್ರಕರಣ ಕಂಡು ಬಂದಿದ್ದವು. ಅಕ್ಕಪಕ್ಕದಲ್ಲಿ ಇನ್ನೂ ಮೂವರು ಸೋಂಕಿತರು (ಮೈಬೂಬಸುಭಾನ ದರ್ಗಾ ಬಳಿ 2 ಹಾಗೂ ನಾಗೂರ ರಸ್ತೆಯಲ್ಲಿ ಇನ್ನೋರ್ವ) ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಸಮೀಪದಲ್ಲಿ ಅಮೀನ ದರ್ಗಾ ಬಳಿಯ ಓರ್ವ ವ್ಯಕ್ತಿ ಚಿಕಿತ್ಸೆ ಪಡೆದು ಭಾನುವಾರ ಬಿಡುಗಡೆಯಾಗಿದ್ದು, ಹೋಮ್ ಕ್ವಾರಂಟೈನ್ ಬಾಕಿ ಇದೆ. ಪಟ್ಟಣದ ಒಟ್ಟು 5 ಪ್ರದೇಶಗಳಲ್ಲಿ ಒಟ್ಟು 6 ಜನ ಸೋಂಕಿತರು ಕಂಡು ಬಂದಿದ್ದಾರೆ. ಅಲ್ಲದೆ 4 ಸೀಲ್ಡೌನ್ ಪ್ರದೇಶಗಳು ವಾರದ ಸಂತೆ ನಡೆದ ಸ್ಥಳದ ಸಮೀಪದಲ್ಲಿವೆ. ತೆಲಗಿ ರಸ್ತೆಯಲ್ಲಿ 6 ಪ್ರಕರಣ ಕಂಡು ಬಂದಿರುವ ಹಿನ್ನೆಲೆ ಪುರಸಭೆ ಇಂದಿನ ವಾರದ ಸಂತೆಯನ್ನು ನಿಷೇಧಿಸಿತು.
ಆದರೂ ಸಹ ನಿಯಮ ಉಲ್ಲಂಘಿಸಿ ವ್ಯಾಪಾರ, ವಹಿವಾಟು ಜೋರಾಗಿ ನಡೆಯುತ್ತಿದೆ. ಪೊಲೀಸ್ ಠಾಣೆ ಸೀಲ್ಡೌನ್ ಆಗಿದ್ದು ಹಲವು ಪೊಲೀಸರು ಹೋಮ್ ಕ್ವಾರಂಟೈನ್ನಲ್ಲಿರುವ ಸಮಯದ ದುರುಪಯೋಗ ಪಡಿಸಿಕೊಂಡು ವ್ಯಾಪಾರಸ್ಥರು ಸಂತೆ ಮಾಡಲು ನಿರ್ಧರಿಸಿರುವುದು ಕಂಡು ಬಂದಿದೆ.