ವಿಜಯಪುರ: ನಗರದ ಕಾಲೇಭಾಗ ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ದೇವರ ಮೊರೆ ಹೋಗುತ್ತಿದ್ದು, ವಿಶಿಷ್ಟ ಆಚರಣೆಗೆ ಮುಂದಾಗಿದ್ದಾರೆ.
ಅಪಘಾತ ತಪ್ಪಿಸಲು ವಿಶಿಷ್ಟ ಆಚರಣೆ ಅನುಸರಿಸುತ್ತಿರುವ ಬಗ್ಗೆ ಸ್ಥಳೀಯರು ಮಾತನಾಡಿರುವುದು ವಿಜಯಪುರ ನಗರದ ಕಾಲೇಭಾಗ ಪ್ರದೇಶದಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತಿದೆ. ಕಾಲಲ್ಲಿ ಚಪ್ಪಲಿ ಹಾಕದೇ, ವಾಹನಗಳನ್ನು ಬಳಸದೆ, ಕೆಲಸಕ್ಕೂ ಹೋಗದೆ, ಊಟ ಮಾಡದೇ ವಾರ ಆಚರಣೆ ಮಾಡುತ್ತಿದ್ದಾರೆ. ಊರಿನ ಕೆಲ ಯುವಕರು ಅಪಘಾತದಲ್ಲಿ ನಿಧನ ಹೊಂದಿದ ಕಾರಣ ಈ ಆಚರಣೆ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಆರು ಜನ ನಿಧನರಾದ ಕಾರಣ ಆತಂಕದಲ್ಲಿದ್ದ ಜನರು ಬಳಿಕ ಊರಿನ ಜಟ್ಟಿಲಿಂಗೇಶ್ವರ ಮರಗಮ್ಮನ ದೇವರ ಮೊರೆ ಹೋಗಿದ್ದರು. ಅವಘಡ ನಡೆಯದಂತೆ ತಡೆಯಲು ವಾರ ಆಚರಣೆ ಮಾಡಲು ಪೂಜಾರಿಗಳು ಸೂಚನೆ ನೀಡಿದ ಕಾರಣ ಕಳೆದ ಮಂಗಳವಾರ ಹಾಗೂ ಇಂದು ಶುಕ್ರವಾರ ಈ ವಿಶಿಷ್ಟ ಸಂಪ್ರದಾಯ ಆಚರಿಸುತ್ತಿದ್ದಾರೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬರುವ ಮಂಗಳವಾರ ಹಾಗೂ ಶುಕ್ರವಾರ ಈ ಆಚರಣೆ ನಡೆಯಲಿದೆ.
500 ಕ್ಕೂ ಅಧಿಕ ಮನೆಗಳಿರುವ ಕಾಲೇಭಾಗ ಪ್ರದೇಶದಲ್ಲಿ ಇಂಥದೊಂದು ಆಚರಣೆ ನಡೆಯುತ್ತಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡಿ ಜೀವನ ನಡೆಸುವ ಕಾಲೇಭಾಗ ಪ್ರದೇಶದ ಬಹುತೇಕ ಜನರು, ಕಡ್ಡಾಯವಾಗಿ ಶುಕ್ರವಾರ ಹಾಗೂ ಮಂಗಳವಾರ ಕೆಲಸಕ್ಕೂ ಹೋಗದೆ ವಾರ ಆಚರಣೆ ಮಾಡುತ್ತಿದ್ದಾರೆ. ಈ ಆಚರಣೆಯಿಂದಾಗಿ ಊರಿನಲ್ಲಿ ಅಪಘಾತ ಪ್ರಕರಣಗಳು ಕಡಿಮೆ ಆಗುತ್ತದೆ ಅನ್ನೋ ನಂಬಿಕೆ ಅಲ್ಲಿಯ ಜನರದ್ದು.
ದೇವರ ಕೃಪೆಗಾಗಿ ವಿಶಿಷ್ಠ ಆಚರಣೆ: ಮುಂದಿನ ಒಂದು ತಿಂಗಳ ನಂತರ ಆಚರಿಸುವ ಜಟ್ಟಿಲಿಂಗೇಶ್ವರ ಮರಗಮ್ಮ ಜಾತ್ರಾ ಮಹೋತ್ಸವದವರೆಗೂ ಈ ಆಚರಣೆ ನಡೆಯಲಿದೆ. ಇದೇ ಮೊದಲ ಬಾರಿ ಸಂಕಷ್ಟಕ್ಕೆ ಸಿಲುಕಿರುವ ಜನ ಈ ವಿಶಿಷ್ಟ ಆಚರಣೆ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಈ ರೀತಿ ಒಂದೇ ತಿಂಗಳಲ್ಲಿ ಹೆಚ್ಚು ಅಪಘಾತದಲ್ಲಿ ಊರಿನ ಜನ ಸಾವನ್ನಪ್ಪಿಲ್ಲ ಎನ್ನುವುದು ಹಿರಿಯರ ಮಾತಾಗಿದೆ. ಈ ಬಾರಿ ಒಂದೇ ತಿಂಗಳಲ್ಲಿ 6 ಜನ ಅಪಘಾತದಲ್ಲಿ ಸಾವನ್ನಪ್ಪಿದ ಕಾರಣ ದೇವರ ಕೃಪೆಗಾಗಿ ಈ ವಿಶಿಷ್ಟ ಆಚರಣೆ ಮಾಡುತ್ತಿದ್ದಾರೆ.
ಓದಿ:'ಈ ಸರ್ಕಾರ ಏನೂ ಮಾಡಲ್ಲ, ನಮ್ಮ ಸರ್ಕಾರ ಬಂದಾಗ ಹೇಳಯ್ಯಾ': ಮೇಟಿ ಮೇಲೆ ಸಿದ್ದರಾಮಯ್ಯ ಗರಂ