ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರವನ್ನು ಸರ್ಕಾರ ವಿಆರ್ಎಸ್ ಎಂಬ ಖಾಸಗಿ ಸಂಸ್ಥೆಗೆ ನಿರ್ವಹಣೆ ಮಾಡಲು ನೀಡಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ನಿರ್ವಹಣೆ ಮಾಡುವ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಡಯಾಲಿಸಿಸ್ ಕೇಂದ್ರದಲ್ಲಿ ಔಷಧಿಗಳ ಕೊರತೆ, ಕೆಟ್ಟು ನಿಂತಿರುವ ಯಂತ್ರಗಳಿಂದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯ ಈ ಡಯಾಲಿಸಿಸ್ ಕೇಂದ್ರವನ್ನೇ ನಂಬಿದ್ದರು. ಆದರೆ, ಈಗ ಈ ಡಯಾಲಿಸಿಸ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಕೇಂದ್ರಗಳತ್ತ ಹೋಗಬೇಕಾಗಿದೆ. ತಿಂಗಳಿಗೆ 4-5 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಖಾಸಗಿ ಡಯಾಲಿಸಿಸ್ ಕೇಂದ್ರಗಳಲ್ಲಿ ಹೆಚ್ಚಿನ ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸುಮಾರು 12 ಡಯಾಲಿಸಿಸ್ ಯಂತ್ರಗಳಿವೆ. ಈ ಪೈಕಿ ನಿರ್ವಹಣೆ ಇಲ್ಲದೆ 8 ಯಂತ್ರಗಳು ಕೆಟ್ಟು ನಿಂತಿವೆ. ಇರುವ 4 ಯಂತ್ರಗಳಲ್ಲಿ ರೋಗಿಗಳಿಗೆ ಡಯಾಲಿಸಿಸ್ ಮಾಡಬೇಕು. ನಿತ್ಯ 30 ರಿಂದ 40 ರೋಗಿಗಳು ಡಯಾಲಿಸಿಸ್ಗಾಗಿ ಬರುತ್ತಾರೆ. ಇದರ ಜೊತೆಗೆ ವೈದ್ಯರ ಕೊರತೆಯೂ ಇದೆ. ಕಿಡ್ನಿ ತಜ್ಞ ವೈದ್ಯರು ಇಲ್ಲಿ ಇಲ್ಲದ ಕಾರಣ ಕಿಡ್ನಿ ವೈಫಲ್ಯ ಅನುಭವಿಸುತ್ತಿರುವ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.