ವಿಜಯಪುರ: ಅವಳಿ ಜಿಲ್ಲೆಯ ಜೀವನಾಡಿ ಲಾಲ್ ಬಹುದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಭರ್ತಿಯಾಗಲು ಇನ್ನೇನು ಕೇವಲ ಅರ್ಧ ಅಡಿಯಷ್ಟು ನೀರು ಬೇಕಿದ್ದು, ಈ ಬಾರಿಯಾದರೂ ಮುಂಗಾರು-ಹಿಂಗಾರು ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗಬಹುದೆಂಬ ನಿರೀಕ್ಷೆ ರೈತರದ್ದಾಗಿದೆ.
ಆಲಮಟ್ಟಿ ಜಲಾಶಯ ಭರ್ತಿಗೆ ಇನ್ನು ಅರ್ಧ ಅಡಿಯಷ್ಟೇ ಬಾಕಿ 519.60 ಮೀಟರ್ ಅಡಿಯ ಜಲಾಶಯದಲ್ಲಿ ಶನಿವಾರದೆವರೆಗೆ 518.82 ಮೀಟರ್ ನೀರು ಸಂಗ್ರಹವಾಗಿದ್ದು, ಇನ್ನು ಅರ್ಧ ಅಡಿ ನೀರು ಮಾತ್ರ ಜಲಾಶಯ ಭರ್ತಿಗೆ ಬೇಕಾಗಿದೆ.
ಮಹಾರಾಷ್ಟ್ರ ರಾಜ್ಯದ ಮಹಾಬಲೇಶ್ವರ, ಸಾತಾರಾ ಸೇರಿದಂತೆ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ನಿರೀಕ್ಷೆ ಮೀರು ನೀರು ಹರಿದು ಬಂದಿದೆ. ಸದ್ಯ 123.081 ಟಿಎಂಸಿ ನೀರು ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ 518.75 ಮೀಟರ್ ನೀರಿನ ಸಂಗ್ರಹವಿತ್ತು. ಒಟ್ಟು 108.97 ಟಿಎಂಸಿ ನೀರು ಸಂಗ್ರಹವಾಗಿತ್ತು.ಕಳೆದ ಎರಡು ದಿನಗಳಿಂದ ಜಲಾಶಯ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಒಳಹರಿವು ಸಹ ಕಡಿಮೆಯಾಗಿತ್ತು. ಹೀಗಾಗಿ ನೀರಿನ ಸಂಗ್ರಹ ಪ್ರಮಾಣ ಸಹ ಕಡಿಮೆಯಾಗುವ ಭೀತಿ ಎದುರಾಗಿತ್ತು. ಇದಕ್ಕಾಗಿ ಹೊರಹರಿವು ಸಹ ಕಡಿಮೆ ಮಾಡಲಾಗಿತ್ತು. ಈಗ ಮತ್ತೆ ಮಳೆ ಆರ್ಭಟ ಹೆಚ್ಚಾದ ಕಾರಣ ಹೊರ ಹರಿವು ಸಹ ಹೆಚ್ಚುವರಿಯಾಗಿ ಬಿಡಲಾಗುತ್ತಿದೆ. ಸದ್ಯ ಒಳಹರಿವು 2,62,99 ಲಕ್ಷ ಕ್ಯೂಸೆಕ್ ಇದ್ರೆ ಹೊರ ಹರಿವು 962 ಕ್ಯೂಸೆಕ್ ಇದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಇನ್ನೂ ಹೆಚ್ಚುವರಿ ಮಳೆಯಾದರೆ ಆಲಮಟ್ಟಿ ಭರ್ತಿಯಾದ ಮೇಲೆ ಎಲ್ಲ 26 ಕ್ರೆಸ್ಟ್ ಗೇಟ್‍ಗಳನ್ನು ತೆರೆದು ನಾರಾಯಣಪುರ(ಬಸವಸಾಗರ) ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುವ ಯೋಚನೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ವ್ಯವಸ್ಥಾಪಕರು ಇದ್ದಾರೆ.
ಇಂದು ಐಸಿಸಿ ಸಭೆ:
ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸುವ ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಇಂದು ಸಚಿವ ಶಿವಾನಂದ ಪಾಟೀಲ ನೇತ್ವತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರ ಜಿಲ್ಲೆಗಳು ಒಳಗೊಂಡಿರುವ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಕಳೆದ ವರ್ಷ ನೀರಿನ ಕೊರತೆ ಇರುವ ಕಾರಣ ಕಾಲುವೆಗಳಿಗೆ ನೀರು ಹರಿಸಬಾರದು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು ಸಾರಾಗವಾಗಿ ನೀರು ಹರಿಯುವುದು ಹಾಗೂ ಕೊನೆ ಹೊಲಗಳಿಗೆ ನೀರು ತಲುಪುವುದು ಕಷ್ಟಸಾಧ್ಯವಾಗಿದೆ. ಮೊದಲು ಕಾಲುವೆಗಳಲ್ಲಿನ ಹೂಳು ಎತ್ತಿ ಆನಂತರ ನೀರು ಹರಿಸಬೇಕು ಎನ್ನುವ ಬೇಡಿಕೆ ಸಹ ರೈತರದ್ದಾಗಿದೆ. ರಾಜಕೀಯ ಹೈಡ್ರಾಮ್ ಮಧ್ಯೆ ಐಸಿಸಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ ಭಾಗವಹಿಸುವುದು ಡೌಟ್ ಎನ್ನಲಾಗುತ್ತಿದೆ. ಹಾಗೇನಾದ್ರೂ ಆದ್ರೆ ಕೆಬಿಜೆಎನ್‍ಎಲ್ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬಹುದಾಗಿದೆ.