ವಿಜಯಪುರ: ಬೆಳಗಾವಿಯಲ್ಲಿ ನಡೆದ ಮಹಿಳೆಯ ಘಟನೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಆರೋಪ ವಿಷಯವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಮೇಲಿನವರಿಂದ ನಮಗೆ ಆದೇಶ ಬಂದಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಘಟನೆ ಬಗ್ಗೆ ಕೇವಲ ಉಗ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದರೆ, ಸಾಲದು. ಜೆಡಿಎಸ್ ಶಾಸಕರು ಮತ್ತು ನಾವು ಹೋರಾಟ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಇದರಿಂದ ಸರ್ಕಾರ ಕೂಡ ಸ್ಪಂದಿಸಲು ಸಾಧ್ಯವಾಗಿವೆ ಎಂದು ಹೇಳಿದರು.
ಬೆಳಗಾವಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯ ಮೇಲೆ ಬೆತ್ತಲೆ ಮೆರವಣಿಗೆ ನಡೆದಾಗ ರಾಹುಲ್ ಗಾಂಧಿ ಖಂಡಿಸಿದ್ದರು. ಉತ್ತರ ಪ್ರದೇಶದ ಘಟನೆಯಷ್ಟೇ ಬೆಳಗಾವಿಯ ಘಟನೆಯು ಗಂಭೀರ ವಿಷಯ. ನಾನು ಉತ್ತರ ಪ್ರದೇಶದ ಘಟನೆಯನ್ನೂ ನಾನು ಸಮರ್ಥನೆ ಮಾಡಿಕೊಳ್ಳುವುದು. ಆ ಘಟನೆಯೂ ತಪ್ಪು. ಈ ಘಟನೆಯೂ ತಪ್ಪು. ಈ ಘಟನೆಯನ್ನು ರಾಜ್ಯದ ನಮ್ಮ ಪಕ್ಷದವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಿನ್ನೆ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದ್ದರು. ಈ ಎರಡು ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ಆದೇಶಿಸಿದ್ದಾರೆ ಎಂಬುವುದಾಗಿ ವಿವರಿಸಿದರು.
ಪ್ರತಿಪಕ್ಷದ ನಾಯಕ, ಅಧ್ಯಕ್ಷನೂ ನಾನೇ ಆಗಿದ್ದೇನೆ:ಬರೀ ಉಗ್ರವಾಗಿ ಖಂಡಿಸಿದರೆ, ಏನೂ ಆಗುವುದಿಲ್ಲ. ನಾಳೆ ಕೊಲೆ ಆರೋಪಿಯ ಪ್ರಕರಣ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತೇವೆ ಎಂದರೆ, ಅರಾಜಕತೆ ಉಂಟಾಗುತ್ತೆ. ಹೀಗಾಗಿ ನಾನು ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಕೋರ್ಟ್ಗೆ ಹೋಗಿದ್ದು. ಜನವರಿ 5ಕ್ಕೆ ಮತ್ತೆ ವಿಚಾರಣೆ ಪ್ರಾರಂಭವಾಗುತ್ತೆ. ನ್ಯಾಯಕ್ಕೆ ಜಯ ಸಿಕ್ಕೆ ಸಿಗುತ್ತೆ. ಭ್ರಷ್ಟಾಚಾರದ ವಿರುದ್ಧ ನಾವಿದ್ದೇವೆ ಎಂದರು. ಇದೇ ವೇಳೆ, ನಾನೇ ಪ್ರತಿಪಕ್ಷದ ನಾಯಕ, ಪಕ್ಷದ ಅಧ್ಯಕ್ಷನೂ ನಾನೇ ಆಗಿದ್ದೇನೆ. ಪಕ್ಷದ ಪರ ಸಕ್ರಿಯವಾಗಿದ್ದೇನೆ. ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂದು ತೋರಿಸುವ ಕೆಲಸ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.