ಮುದ್ದೇಬಿಹಾಳ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆದಿದ್ದು, ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಸರ್ಕಾರ ಸತ್ಯಾಗ್ರಹಕ್ಕೆ ಕೂರಿಸಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಗುರುಪ್ರಸಾದ ದೇಶಮುಖ ಆರೋಪಿಸಿದ್ದಾರೆ.
ತಾಲೂಕಿನ ನಾಲತವಾಡ ಹೋಬಳಿಯ ವ್ಯಾಪ್ತಿಯ ಪಂಚಮಸಾಲಿ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈ ಬಗ್ಗೆ ಕಳೆದ 26 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದ್ದರೂ ಸಹ, ಯಾವುದೇ ರೀತಿ ಸೂಕ್ತವಾಗಿ ಸ್ಪಂದಿಸಿಲ್ಲ. ಆದ್ದರಿಂದ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು 2012 ರಿಂದ ನಾಲ್ಕು ಹಂತದ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ.