ವಿಜಯಪುರ: ಹರಿಹರ ಪೀಠ ಹಾಗೂ ಸದ್ಯ ಸ್ಥಾಪನೆಯಾಗುತ್ತಿರುವ ಮೂರನೇ ಪೀಠ ಸಚಿವ ಮುರುಗೇಶ ನಿರಾಣಿ ಪರವಾಗಿದೆ ಎಂದು ಕೆಲವರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ನಿರಾಣಿ ಅವರು ಮೊದಲೆರಡು ಪೀಠಗಳಿಗೆ ತಮ್ಮ ಕೈಲಾದ ಸಹಾಯಹಸ್ತ ಚಾಚಿದ್ದಾರೆ ಎಂದು ಪಂಚಮಸಾಲಿ ಸಮುದಾಯದ ಮುಖಂಡ ಸುರೇಶ್ ಬಿರಾದಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ತಾಲೂಕಿನ ಆಲಗೂರದಲ್ಲಿ ಫೆ.14ರಂದು ಮೂರನೇ ಪೀಠ ಉದ್ಘಾಟನೆಯಾಗಲಿದೆ. ಈ ಮೂರನೇ ಪೀಠದಲ್ಲಿ ಸುಮಾರು 60 ಸ್ವಾಮೀಜಿಗಳಿದ್ದಾರೆ. ಈ ಭಾಗದ ಜನರಿಗೆ ಉತ್ತಮ ಸಂಸ್ಕಾರ ನೀಡಲು ಮೂರನೇ ಪೀಠ ಸ್ಥಾಪಿಸಲಾಗುತ್ತಿದೆ ಎಂದರು.
ಪಂಚಮಸಾಲಿ ಸಮುದಾಯದ ಜನರಿಗೆ ಧಾರ್ಮಿಕ ಶಿಕ್ಷಣ ಸಿಗಲಿ ಎನ್ನುವ ಸದುದ್ದೇಶ ಹೊಂದಲಾಗಿದೆ. ಈಗಾಗಲೇ ಹರಿಹರ ಪೀಠ ಹಾಗೂ ಕೂಡಲಸಂಗಮ ಪೀಠ ಸ್ಥಾಪನೆಯಾಗಿದೆ. ಹರಿಹರ ಪೀಠ ಸ್ಥಾಪನೆಯಾಗುವ ಹಿಂದಿನ ದಿನ ಕೂಡಲಸಂಗಮ ಪೀಠ ಸ್ಥಾಪನೆಯಾಗಿದೆ.
ಪಂಚಮಸಾಲಿ ಸಮುದಾಯದ 3ನೇ ಪೀಠ ಸ್ಥಾಪನೆ ವಿಚಾರ.. ಸಚಿವ ಮುರುಗೇಶ ನಿರಾಣಿ ಪರ ಬ್ಯಾಟಿಂಗ್ ನಡೆಸಿರುವ ಸಮುದಾಯದ ಮುಖಂಡರು.. ಹೀಗಾಗಿ, ಕೂಡಲಸಂಗಮ ಪೀಠ ಅಸಂವಿಧಾನಿಕವಾಗಿದೆ. ಕೂಡಲಸಂಗಮ ಪೀಠ ಸ್ಥಾಪನೆಗೆ ಯಾವುದೇ ಶ್ರೀಗಳು, ಮುಖಂಡರು ಬೆಂಬಲ ನೀಡಿರಲಿಲ್ಲ, ಆದರೂ ಪೀಠ ಸ್ಥಾಪನೆ ಮಾಡಲಾಗಿದೆ. ಹೀಗಾಗಿ, ಇದು ಅಸಂವಿಧಾನಿಕವಾಗಿ ಪೀಠ ಮಾಡಲಾಗಿದೆ ಎಂದು ಆರೋಪಿಸಿದರು.
ಸದ್ಯ ಸ್ಥಾಪನೆಯಾಗುತ್ತಿರುವ ಮೂರನೇ ಪೀಠಕ್ಕೆ ಎಲ್ಲರ ಸಹಕಾರ ದೊರೆತಿದೆ. ಪಂಚಮಸಾಲಿ ಮೂರನೇ ಪೀಠ ಪಂಚ ತತ್ವಗಳ ಆಧಾರದಲ್ಲಿ ಸ್ಥಾಪಿಸಲಾಗಿದೆ. ಇದು ಯಾವುದೇ ಪೀಠದ ಪರ್ಯಾಯವಲ್ಲ, ಸಮಾಜ ಒಡೆಯುವ ಕೆಲಸವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರಾಣಿ ಪೀಠವಲ್ಲ :ಮೂರನೇ ಪೀಠ ಸಚಿವ ಮುರುಗೇಶ ನಿರಾಣಿ ಅವರದ್ದು ಅನ್ನೋದು ತಪ್ಪು. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಮೂರನೇ ಪೀಠದ ಬಗ್ಗೆ ಯಾವುದೇ ಗೊಂದಲ ಬೇಡ, ಇದರ ವಿರುದ್ಧ ಅಪಪ್ರಚಾರ ಮಾಡಬೇಡಿ ಎಂದರು.
ಬಬಲೇಶ್ವರ ಬ್ರಹನ್ಮಮಠದ ಮಹಾದೇವ ಶಿವಾಚಾರ್ಯರು ಮಾತನಾಡಿ, ಈಗಾಗಲೇ ಎರಡು ಪೀಠಗಳಿದ್ದು, ಮೂರನೇ ಪೀಠದ ಅವಶ್ಯಕತೆ ಇದೆ ಎಂದು ಮನಗಂಡಿದ್ದೇವೆ. ಸದ್ಯ ಚಾಲ್ತಿಯಲ್ಲಿರುವ ಎರಡು ಪೀಠಗಳು ಧರ್ಮ ರಕ್ಷಣೆ, ಸಂಸ್ಕಾರ ಕಲಿಸುವುದು ಸೇರಿ ಧಾರ್ಮಿಕ ಬೋಧನೆ ಮಾಡಿಲ್ಲ. ಹೀಗಾಗಿ, ಮೂರನೇ ಪೀಠ ಸ್ಥಾಪನೆ ಅನಿರ್ವಾಯವಾಗಿತ್ತು ಎಂದರು.
ಈ ಹಿಂದೆ ಹರಿಹರ ಪೀಠಕ್ಕೆ ತಮ್ಮನ್ನು ಪೀಠಾಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದರು. ನಂತರ ಹರಿಹರ ಪೀಠದಿಂದ ತಮ್ಮನ್ನು ಕೈಬಿಡಲಾಗಿದೆ. ಹೀಗಾಗಿ, ನಾನು ಸುಮ್ಮನೆಯಾಗಿದ್ದೆ, ಈಗ ಮೂರನೇ ಪೀಠದ ಅವಕಾಶ ದೊರೆತಿದೆ. ನಾನು ಸಹ ಪೀಠಾಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು.
ಇದನ್ನೂ ಓದಿ:ನಾನೆಂದೂ ಸಿಎಂ ಕನಸು ಕಂಡವನಲ್ಲ, ಪಂಚಮಸಾಲಿ 3ನೇ ಪೀಠ ಆದ್ರೆ ಅನುಕೂಲ: ಸಚಿವ ನಿರಾಣಿ
ಮನಗೂಳಿ ಮಠದ ಸಂಗನಬಸವ ಶ್ರೀಗಳು ಮಾತನಾಡಿ, ಎರಡು ಅಲ್ಲ, ಮೂರು ಅಲ್ಲ ಪಂಚಪೀಠಗಳಾದರೆ ಏನು ತಪ್ಪು ಎಂಬುವುದು ಹರಿಹರ ಪೀಠದ ಮಹಾಂತ ಶ್ರೀಗಳ ಕನಸಾಗಿತ್ತು. ಹಾಗಾಗಿ, ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಮೂರನೇ ಪೀಠ ಸ್ಥಾಪಿಸಲಾಗಿದೆ. ಎಲ್ಲರ ಒಪ್ಪಿಗೆಯಂತೆ ಮಹಾದೇವ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ