ವಿಜಯಪುರ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪಿ. ಸುನೀಲಕುಮಾರ ಇಂದು ಅಧಿಕಾರ ಸ್ವೀಕರಿಸಿದರು.
ಕಲಬುರಗಿ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಸುನೀಲಕುಮಾರ, ಎರಡು ಜಿಲ್ಲೆಗಳಲ್ಲೂ ಜನಮನ್ನಣೆ ಗಳಿಸಿದ್ದರು. ಇತ್ತೀಚೆಗೆ ಕೊವಿಡ್- 19 ಸಂಕಷ್ಟದಲ್ಲಿ ಕೊಪ್ಪಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಸರ್ಕಾರ ದಿಢೀರ್ ಎಂದು ವರ್ಗಾವಣೆ ಮಾಡಿತ್ತು. ವರ್ಗಾವಣೆ ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ನಂತರ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ನಿರ್ದೇಶಕರಾಗಿ 18 ದಿನ ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಈಗ ವಿಜಯಪುರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿ ಪಿ. ಸುನೀಲಕುಮಾರ ಅಧಿಕಾರ ಸ್ವೀಕಾರ ಈ ವೇಳೆ ಮಾತನಾಡಿದ ನೂತನ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ಶ್ರಮಿಸುತ್ತೇನೆ. ಇಂದು ಇದಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದರು.