ಮುದ್ದೇಬಿಹಾಳ :ಅಬ್ಬಬ್ಬಾ ಎಂದರೆ 10 ರಿಂದ 12 ತಾಸುಗಳಲ್ಲಿ ಜೋಡೆತ್ತುಗಳಿಂದ ಹೊಲಗಳಲ್ಲಿ ಅಂದಾಜು 8-10 ಎಕರೆ ಹರಗಲು ಸಾಧ್ಯ. ಆದರೆ, ಮುದ್ದೇಬಿಹಾಳ ತಾಲೂಕಿನ ಬಸರಕೋಡದ ಈ ಜೋಡೆತ್ತುಗಳು 10 ತಾಸುಗಳಲ್ಲಿ ಬರೋಬ್ಬರಿ 20 ಎಕರೆ ಜಮೀನು ಹರಗುವ ಮೂಲಕ ಅಚ್ಚರಿ ಮೂಡಿಸಿವೆ.
ಹೇ.. ಹಲೇ... ಹರಗಾ.... ಹರಗಾ.... ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಮಲ್ಲು ಮೇಟಿ ಹಾಗೂ ಶಿವಾನಂದ ಮೇಟಿ ಎಂಬುವರ ಎತ್ತುಗಳು ಮಂಗಳವಾರ ಕೇವಲ 10 ಗಂಟೆಗಳಲ್ಲಿ 20 ಎಕರೆ ಹೊಲವನ್ನು ಹರಗಿ ಬೆರಗು ಮೂಡಿಸಿವೆ.
ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೂ ಹೊಲ ಹರಗಿವೆ. ಈ ನಡುವೆ ಎಲ್ಲೂ ವಿಶ್ರಾಂತಿ ತೆಗೆದುಕೊಳ್ಳದೇ ಬಿತ್ತಿರುವುದು ವಿಶೇಷ. ಟ್ರ್ಯಾಕ್ಟರ್ ಮೂಲಕ ಹರಗಿದರೂ ಇಷ್ಟೊಂದು ಪ್ರಮಾಣದಲ್ಲಿ ಹರಗಲು ಸಾಧ್ಯವಿಲ್ಲ ಎಂದು ಸ್ಥಳೀಯರಾದ ನಾಗರಾಜ ತಂಗಡಗಿ ತಿಳಿಸಿದರು.
ಎತ್ತುಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು, ರೈತನ ಸಮೇತ ಜೋಡೆತ್ತುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲು ಮೇಟಿ, ವಿರೇಶ್ ಬೇಲಾಳ, ಶಿವನಗೌಡ ಮೇಟಿ, ಆನಂದ ಯಾಳವಾರ, ಗೌಡಪ್ಪಗೌಡ ಮೇಟಿ, ನಾಗರಾಜ ತಂಗಡಗಿ, ವಿನೋದ್ ಕಿರಿಶ್ಯಾಳ ಮತ್ತಿತರರು ಪಾಲ್ಗೊಂಡಿದ್ದರು.