ವಿಜಯಪುರ: ದಕ್ಷ ಆಡಳಿತಾಧಿಕಾರಿಯಾಗಿ ಗುರುತಿಸಿಕೊಂಡಿದ್ದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ವರ್ಗಾವಣೆಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಯಿಂದ ಗುಮ್ಮಟನಗರಿ ಜನತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೆಚ್ಚಿನ ಅಧಿಕಾರಿಯ ಫೋಟೋ ಹಾಕಿ, ಸರಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ.
ಡಿಸಿ ವೈ.ಎಸ್.ಪಾಟೀಲ ಕೋವಿಡ್ ಸಂಕಷ್ಟದಲ್ಲಿ ಅಧಿಕಾರಿಗಳ ತಂಡ ಕಟ್ಟಿಕೊಂಡು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿ, ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದರು. ಕೋವಿಡ್ ಸಂಕಷ್ಟ ಒಂದೇ ಅಲ್ಲದೆ ಕಳೆದ ಬಾರಿ ಉಂಟಾದ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ತಮ್ಮ ಅಜ್ಜ ತೀರಿ ಕೊಂಡರೂ ಸಹಿತ ಅಂತ್ಯಕ್ರಿಯೆ ಗೆ ಹೋಗದೆ ಪ್ರವಾಹ ನಿಯಂತ್ರಣಕ್ಕೆ ಮುಂದಾಗಿದ್ದರು. ಇದು ಜಿಲ್ಲೆಯ ಜನತೆಗೆ ಅವರು ಕೊಟ್ಟ ಕೊಡುಗೆಯಾಗಿತ್ತು, ಅವರ ಸೇವೆಗೆ ಜನ ಖುಷಿಯಾಗಿದ್ದರು. ಅಧಿಕಾರಿಯ ವರ್ಗಾವಣೆ ಸುದ್ದಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹ್ಯಾಷ್ ಟ್ಯಾಗ್ ಬಳಸಿ ಆಕ್ರೋಶ ಹೊರಹಾಕಿದ್ದಾರೆ.
ಇದು ಕರ್ನಾಟಕ ಸರ್ಕಾರದ ಅನಿರೀಕ್ಷಿತ ಆದೇಶ, ಬರದ ಜಿಲ್ಲೆಯಲ್ಲಿ ನೀರಿನ ನಿರ್ವಹಣೆ, ಪ್ರವಾಹದಂತಹ ಹಾಗೂ ಇದೀಗ ಮಹಾಮಾರಿ ತಡೆಯುವಲ್ಲಿ ಪಾರದರ್ಶಕ, ಪ್ರಾಮಾಣಿಕ ಕೆಲಸ ಮಾಡಿದ ದಕ್ಷ, ನುರಿತ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಅದೂ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮೈಸೂರಿನ ತರಬೇತಿ ಕೇಂದ್ರಕ್ಕೆ ಕಳಿಸಿದ್ದು ಸರ್ಕಾರದ ವಿಚಿತ್ರ ನಡವಳಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಇದನ್ನು ರಾಜಕೀಯ ಪಿತೂರಿಯಿಂದ ಆದ ವರ್ಗಾವಣೆ, ವರ್ಗಾವಣೆ ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಪಿ.ಸುನೀಲ್ ಕುಮಾರ ಅವರನ್ನ ಸರ್ಕಾರ ನೂತನ ಜಿಲ್ಲಾಧಿಕಾರಿ ಯಾಗಿ ನೇಮಕ ಮಾಡಿ ಆದೇಶಿಸಿದೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡ್ ಜೋರಾಗಿದೆ.