ಮುದ್ದೇಬಿಹಾಳ: ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕಾಣಿಕೆಗಾರರು ಇದ್ದು, ಕುರಿ, ಮೇಕೆಗಳೇ ಆರ್ಥಿಕ ಮೂಲವಾಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡ ಜಿಲ್ಲೆಯ ನಕ್ಷತ್ರ ಕೃಷಿ, ಪಶುಪಾಲನೆ ಹಾಗೂ ತರಬೇತಿ ಸಂಸ್ಥೆಯವರು ನಮ್ಮ ಸಂಸ್ಥೆಯ ಪ್ರಮಾಣ ಪತ್ರದಿಂದ ಬ್ಯಾಂಕ್ ಸಾಲ ದೊರೆಯುತ್ತದೆ ಎಂದು ಕುರಿ ಸಾಕಣೆದಾರರಿಗೆ ನಂಬಿಸಿ ವಂಚಿಸಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜ.31 ರಂದು ಕುರಿ ಸಾಕಾಣಿಕೆಗಾರರಿಗೆ ತರಬೇತಿ ನೀಡಲಾಗುವುದು, ತರಬೇತಿ ಪಡೆದ ಕುರಿ ಸಾಕಾಣಿಕೆಗಾರರಿಗೆ ತರಬೇತಿ ನೀಡಿದ ಸಂಸ್ಥೆಯ ಪ್ರಮಾಣ ಪತ್ರವನ್ನು ಬ್ಯಾಂಕ್ಗೆ ತೋರಿಸಿದರೆ ತರಬೇತಿ ಪಡೆದುಕೊಂಡವರಿಗೆ ಬ್ಯಾಂಕ್ನವರು ಸಾಲ ಕೊಡುತ್ತಾರೆ ಎಂದು ನಂಬಿಸಿ ಕುರಿ ಸಾಕಾಣಿಕೆಗಾರರಿಗೆ ತಲಾ 1,000 ರೂ.ಗಳನ್ನು ವಸೂಲಿ ಮಾಡಲಾಗಿತ್ತು. ಇದರ ಸತ್ಯಾಸತ್ಯತೆ ಬಗ್ಗೆ ಕೆಲವು ರೈತರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಇದೊಂದು ಹಣ ಹೊಡೆಯಲು ಮಾಡಿದ ಪ್ಲಾನ್ ಎಂಬುದು ತಿಳಿದು ಬಂದಿದೆ.
ಇನ್ನು ಕೂಡಲೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ ಅವರು ಸ್ಥಳಕ್ಕೆ ಭೇಟಿ ನೀಡಿ ತರಬೇತಿ ನೀಡುತ್ತಿದ್ದ ಸಂಸ್ಥೆಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ತರಬೇತಿ ನೀಡುವುದಾಗಿ ಹೇಳಿದ್ದ ನಕ್ಷತ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯಕ್ತಿಯ ಮೇಲೆ ಅನುಮಾನ ಬಂದಾಗ ಕುಲಂಕೂಷವಾಗಿ ಪರಿಶೀಲನೆ ನಡೆಸಿದ್ದಾರೆ.