ವಿಜಯಪುರ: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ರಾಮಕೃಷ್ಣ ಹೆಗಡೆ, ಪಟೇಲರು, ಯಡಿಯೂರಪ್ಪ, ಅನಂತಕುಮಾರ್, ಸದಾನಂದ ಗೌಡ ಸೇರಿದಂತೆ ಎಲ್ಲರೂ ರಾಜ್ಯದ ತುಂಬಾ ಚಪ್ಪಲಿ (ಪಾದರಕ್ಷೆ), ಅಂಗಿ ಹರಕೊಂಡು ಓಡಾಡಿದ್ರು. ಆಗ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. 2004ರಲ್ಲಿ ನಾವೆಲ್ಲ ಬಿಜೆಪಿಗೆ ಸೇರ್ಪಡೆಯಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದರಲ್ಲಿ ನಮ್ಮ ಕೊಡುಗೆಯೂ ಇದೆ ಎಂದು ಸಂಸದ ರಮೇಶ್ ಜಿಗಜಿಣಗಿ ಪಕ್ಷದ ವಿರೋಧಿ ಪಾಳಯಕ್ಕೆ ಟಾಂಗ್ ನೀಡಿದ್ದಾರೆ.
ರಮೇಶ ಜಿಗಜಿಣಗಿ ಅವರದ್ದು ಬಿಜೆಪಿಗೆ ಕೊಡುಗೆ ಏನು ಅನ್ನೋದು ಹಿರಿಯ ನಾಯಕರಿಗೆ ಗೊತ್ತಿದೆ. ಆದರೆ ಛೋಟೋ ಮೋಟೋ ಲೀಡರ್ ಇರ್ತಾರಲ್ಲ. ಅವು ಪಕ್ಷಕ್ಕೆ ಇವನ ಕೊಡುಗೆ ಏನಪ್ಪಾ? ಎಂದು ಪ್ರಶ್ನಿಸುತ್ತಾರೆ. ವಿಜಯಪುರಕ್ಕೆ 1 ಲಕ್ಷ ಕೋಟಿ ತಂದಿದ್ದರೂ ಏನು ಮಾಡಿದ್ದಾರೆ ಅಂತ ಕೇಳ್ತಾರೆ ಎಂದು ಜಿಗಜಿಣಗಿ ನೋವು ಹಂಚಿಕೊಂಡರು.
ಸಮಾಜದ ತೆಗಳಿಕೆ ಮೀರಿ ಬಿಜೆಪಿಗೆ ಸೇರ್ಪಡೆಯಾದೆ: ರಾಜ್ಯದಲ್ಲಿ ಎರಡನೇ ಹಂತದ ನಾಯಕರು ರಮೇಶ ಜಿಗಜಿಣಗಿ ಕೊಡುಗೆ ಏನು ಅಂತ ಕೇಳ್ತಾರೆ. ಇದು ಅವರ ಸಣ್ಣತನ. 2004 ರಲ್ಲಿ ರಾಮಕೃಷ್ಣ ಹೆಗಡೆ ನಿಧನ ಹೊಂದಿದ ಮೇಲೆ ನಾನು ಮೊಟ್ಟ ಮೊದಲು ಬಿಜೆಪಿಗೆ ಸೇರ್ಪಡೆಯಾದ ಮನುಷ್ಯನಾಗಿದ್ದೇನೆ. ಆಗ ಇಡೀ ರಾಜ್ಯದ ದಲಿತ ಜನ ನನ್ನನ್ನು ತೆಗಳಿದ್ರು. ಯಾಕೆ ಬಿಜೆಪಿಗೆ ಹೋಗ್ತೀರಿ ಅದು ಜಾತಿವಾದಿ ಪಕ್ಷ, ಅಂತಹದ್ದು ಇಂತಹದ್ದು ಎಂದು ಬೈದರು. ನನ್ನ ಸಮಾಜದ ತೆಗಳಿಕೆ ಮೀರಿ ಬಿಜೆಪಿಗೆ ಸೇರ್ಪಡೆಯಾದೆ ಎಂದರು.
ಛೋಟಾ ಮೋಟಾ ಸಣ್ಣವರು ಕೇಳ್ತಾರೆ: ಅಲ್ಲಿ ತನಕ ಒಬ್ಬೊಬ್ಬರೆ ಬಿಜೆಪಿಗೆ ಸೇರ್ಪಡೆ ಆಗಿದ್ದರು. ದಲಿತರಷ್ಟೇ ಅಲ್ಲ ಯಾವ ಲಿಂಗಾಯತರು ಬಿಜೆಪಿಗೆ ಸೇರ್ಪಡೆ ಆಗಿರಲಿಲ್ಲ. ಎಲ್ಲರೂ ನನ್ನ ಕಡೆ ನೋಡಿಕೊಂಡು ಕುಳಿತ್ತಿದ್ದರು. ಜನತಾ ಪರಿವಾರದಲ್ಲಿ ಅಂದು ರಮೇಶ್ ಜಿಗಜಿಣಗಿ ಮುಖ್ಯವಾದ ಮನುಷ್ಯ ಎಂದರು. ಅವತ್ತು ಒಂದು ವೇಳೆ ನಮ್ಮ ಜನತಾ ಪರಿವಾರದ ದೇವೇಗೌಡರ ಪಕ್ಷಕ್ಕೆ ನಾನು ಸೇರ್ಪಡೆ ಆಗಿದ್ದರೆ. ಇವತ್ತು ಬಿಜೆಪಿ ಅಧಿಕಾರಕ್ಕೆ ಬರ್ತಿತ್ತಾ?. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಕ್ಕೆ ನಾನೇ ಕಾರಣ. ದೊಡ್ಡವರೆಲ್ಲರಿಗೂ ಇದು ಗೊತ್ತಿದೆ. ಕೊಡುಗೆ ಏನು ಅನ್ನೋದು. ಆದ್ರೆ ಈ ಛೋಟಾ ಮೋಟಾ ಸಣ್ಣವರು ಕೇಳ್ತಾರೆ ಎಂದು ಟಾಂಗ್ ನೀಡಿದರು.
ನರೇಂದ್ರ ಮೋದಿ ಬಗ್ಗೆ ಅತ್ಯಂತ ಅಭಿಮಾನವಿದೆ: ಜನತಾ ಪರಿವಾರ ಒಂದಾಗಿದ್ದರೆ ಯಾವ ಕಾರಣಕ್ಕೂ ಇವತ್ತಿಗೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಒಂದು ಸಲ ಕಾಂಗ್ರೆಸ್ ಒಂದು ಸಲ ಜನತಾ ಪರಿವಾರವೇ ರಾಜ್ಯವನ್ನು ಮುಂದುವರಿಸಿಕೊಂಡು ಹೋಗ್ತಿತ್ತು. ನನ್ನ ಪಕ್ಷದ ಬಗ್ಗೆ ಅಭಿಮಾನವಿದೆ. ನಾನು ಎಂದೂ ಕೂಡಾ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ನಮ್ಮ ನಾಯಕ ನರೇಂದ್ರ ಮೋದಿ ಬಗ್ಗೆ ಅತ್ಯಂತ ಅಭಿಮಾನವಿದೆ. ರಾಜ್ಯ ಸರ್ಕಾರದಲ್ಲಿ ಯಾವುದೂ ನಿರ್ಣಯವಾಗಿಲ್ಲ. ನಿರ್ಣಯ ಆಗೋಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸರಿಯಾಗಿ ನಡೆದಿಲ್ಲ. ನಾನು ಬೇರೆ ರಾಜಕಾರಣಿಗಳಿಗಿಂತ ಭಿನ್ನವಾಗಿದ್ದೇನೆ ಎಂದು ಹೇಳಿದರು.