ಕರ್ನಾಟಕ

karnataka

ETV Bharat / state

ಬಂಗಾರದ ಬೆಲೆ ತಲುಪಿದ ಈರುಳ್ಳಿಗೆ ಕಳ್ಳರ ಕಾಟ..! - Vijayapura onion news

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕಳ್ಳರು ರೈತರು ಹೊಲದಲ್ಲಿ ಸಂಗ್ರಹಿಸಿಟ್ಟಿರುವ ಈರುಳ್ಳಿ ಕಳ್ಳತನ‌ ಮಾಡುತ್ತಿದ್ದು, ಇದರಿಂದಾಗಿ ರೈತರಿಗೆ ಈರುಳ್ಳಿ ಕಾಯುವ ಸ್ಥಿತಿ ಬಂದೊದಗಿದೆ.

onion
ಈರುಳ್ಳಿ

By

Published : Oct 22, 2020, 7:02 PM IST

ವಿಜಯಪುರ:ಸತತವಾಗಿ ಸುರಿಯುತ್ತಿರುವಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದು, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಕಳ್ಳರು ಚಿನ್ನ ಬದಲು ಈರುಳ್ಳಿ ಕದ್ದರೆ ಲಾಭ ಎನ್ನುವ ಲೆಕ್ಕಚಾರದಲ್ಲಿ, ರೈತರು ಹೊಲದಲ್ಲಿ ಸಂಗ್ರಹಿಸಿಟ್ಟಿರುವ ಈರುಳ್ಳಿ ಕಳ್ಳತನ‌ ಮಾಡುತ್ತಿದ್ದು, ರೈತರು ಈಗ ಅವುಗಳನ್ನು ಕಾಯುವ ಪರಿಸ್ಥಿತಿ ಒದಗಿ ಬಂದಿದೆ.

ಈರುಳ್ಳಿಗೆ ಕಳ್ಳರ ಕಾಟ

ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಭೀಮಾನದಿ, ಕೃಷ್ಣಾ ಹಾಗೂ ಡೋಣಿ ನದಿಗೆ ಮಳೆ ಹಾಗೂ ಮಹಾರಾಷ್ಟ್ರದಿಂದ ನೀರು ಬಿಟ್ಟಿರುವ ಕಾರಣ ಪ್ರವಾಹ ಉಂಟಾಗಿತ್ತು. ಇದರಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣ ಕೊಚ್ಚಿ ಹೋಗಿದೆ.‌ ಅದರಲ್ಲಿಯೂ ಚಿತ್ರದುರ್ಗ ಬಿಟ್ಟರೆ ಅತಿ ಹೆಚ್ಚು ಈರುಳ್ಳಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ 8,500 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು.

ಈಗ ಮಹಾಪುರದಿಂದ ಶೇ. 90ರಷ್ಟು ಬೆಳೆ ರೋಗ ಬಾಧೆ, ನೀರಿನಲ್ಲಿ‌ ಕೊಚ್ಚಿ ಹೋಗಿದೆ.‌ ಈಗ ಉಳಿದ ಈರುಳ್ಳಿ ಬೆಳೆ ರಕ್ಷಿಸಲು ರೈತರು ಹೋರಾಟ ನಡೆಸಬೇಕಾಗಿದೆ. ಅದರಲ್ಲಿಯೂ ಕಳ್ಳರು ಈರುಳ್ಳಿ ಬೆಳೆದ ಹೊಲಗಳಿಗೆ ರಾತ್ರಿ ದಾಳಿ ನಡೆಸಿ ಈರುಳ್ಳಿ ಕದಿಯುತ್ತಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಮಸೂತಿ, ಮಲಘಾಣ, ಮುಳವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆದು ಮಾರಾಟಕ್ಕೆ ಸಂಗ್ರಹಿಸಿಟ್ಟ ಈರುಳ್ಳಿ ಕೋಣೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.

ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ವಿಜಯಪುರ ಜಿಲ್ಲೆಯಿಂದಲೇ ಈರುಳ್ಳಿ ರಫ್ತು ಮಾಡಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 100-120 ರೂ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿಗೆ 6-7 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ 8-10 ಸಾವಿರ ರೂ. ಪ್ರತಿ ಕ್ವಿಂಟಲ್ ಗೆ ತೆಗೆದುಕೊಳ್ಳಲಾಗುತ್ತಿದೆ. ಈ ಮಧ್ಯೆ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಸಿಕ್ಕ ದರಕ್ಕೆ ಮಾರಾಟ ಮಾಡಲು ಈರುಳ್ಳಿಯನ್ನು ಲಾರಿಯಲ್ಲಿ ತುಂಬಿಸಿಕೊಂಡು ಕೆಲ ರೈತರು ಬೆಂಗಳೂರ ಕಡೆಗೆ ಹೊರಟಿದ್ದಾರೆ.

ಸದ್ಯ ಕೆಲ ರೈತರು ಬೆಂಗಳೂರಿಗೆ ಈರುಳ್ಳಿ ತೆಗೆದುಕೊಂಡು ಹೋಗುತ್ತಿದ್ದರೆ. ಇನ್ನೂ ಹಲವು ರೈತರು ಸ್ವಲ್ಪ ದಿನ‌ ತಡೆದರೆ ಇನ್ನೂ ಹೆಚ್ಚಿನ ಬೆಲೆ ಬರುವ ನಿರೀಕ್ಷೆಯಿಂದ ಸಂಗ್ರಹಿಸಿಟ್ಟಿರುವ ಈರುಳ್ಳಿ ಕಳ್ಳರಿಂದ ಬಚಾವ್ ಮಾಡಿಕೊಳ್ಳಲು ಸ್ವತ: ರೈತರೇ ಈರುಳ್ಳಿಯನ್ನು ಹಗಲಿರುಳು‌ ಕಾಯುವ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details