ಮುದ್ದೇಬಿಹಾಳ:ತೀವ್ರ ಕುತೂಹಲ ಕೆರಳಿಸಿರುವ ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಅ.28 ರಂದು ನೂತನ ಸದಸ್ಯರುಗಳ ಎರಡೂವರೆ ವರ್ಷಗಳ ವನವಾಸ ಅಂತ್ಯವಾಗಲಿದೆ. ಏತನ್ಮಧ್ಯೆ ಮೀಸಲಾತಿ ಆಟದಲ್ಲಿ ಕೊನೆಗೂ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಹೊಂದಾಣಿಕೆಗೆ ಜಯ ಲಭಿಸುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗಿದೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸದಸ್ಯೆ ಪ್ರತಿಭಾ ರುದ್ರಗೌಡ ಅಂಗಡಗೇರಿ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಪಕ್ಕಾ ಆಗಿದೆ.
ಮುದ್ದೇಬಿಹಾಳ ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಬಲವಿದ್ದು, 8 ಕಾಂಗ್ರೆಸ್, 8 ಬಿಜೆಪಿ, 2 ಜೆಡಿಎಸ್ ಹಾಗೂ ಐವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹಾಗೂ ಹಿಂದುಳಿದ ಅ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಲಾಗಿದೆ.
ಅ.28 ರಂದು ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ :
ಮುದ್ದೇಬಿಹಾಳದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅ.28ರಂದು ಸಭೆ ನಡೆಸುವುದಾಗಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಜಿ.ಎಸ್.ಮಳಗಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ನಾಮಪತ್ರಗಳನ್ನು ಸಲ್ಲಿಸುವುದು, 1 ಗಂಟೆಯಿಂದ ನಾಮಪತ್ರ ಪರಿಶೀಲನೆ, ಬಳಿಕ 10 ನಿಮಿಷ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವುದು ನಂತರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಈ ಪ್ರಕ್ರಿಯೆ ನಂತರ ಉಪಾಧ್ಯಕ್ಷ ಸ್ಥಾನಕ್ಕೂ ಆಯ್ಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಡಿಕೆಶಿಯನ್ನು ಭೇಟಿಯಾದ ಸದಸ್ಯರು :
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪುರಸಭೆಯಲ್ಲಿ ಅಧಿಕಾರ ಸ್ಥಾಪನೆ ಕುರಿತು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರೂ ಅದನ್ನು ಅವರ ಪತಿ ರುದ್ರಗೌಡ ಅಂಗಡಗೇರಿ ತಳ್ಳಿ ಹಾಕಿದ್ದಾರೆ. ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ನಮಗೆ ಬೆಂಬಲ ನೀಡಲು ಕೋರಿದ್ದು ಅದಕ್ಕೆ ಕಾಂಗ್ರೆಸ್, ಪಕ್ಷೇತರ ಸದಸ್ಯರು ಒಪ್ಪಿದ್ದಾರೆ ಎಂದು ಹೇಳಿದ್ದಾರೆ.