ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಭಾರಿ ಮಳೆ.. ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿ ವೃದ್ಧ ಸಾವು

ಆಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ವ್ಯಾಪ್ತಿಯಲ್ಲಿ ನಡೆದಿದೆ.

By

Published : Aug 7, 2022, 4:54 PM IST

ಹಳ್ಳ
ಹಳ್ಳ

ವಿಜಯಪುರ: ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋದ ಎಮ್ಮೆಯನ್ನು ರಕ್ಷಿಸಲು ಹೋಗಿದ್ದ ರೈತನೊಬ್ಬ ತಾನೂ ಕೊಚ್ಚಿಕೊಂಡು ಹೋಗಿ ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಚೌದ್ರಿ ತೋಟದ ರಸ್ತೆಯಲ್ಲಿರುವ ಹಳ್ಳದಲ್ಲಿ ಸಂಭವಿಸಿದೆ.

ಕೊಲ್ಹಾರದ ರೈತ ನಂದಪ್ಪ ಸಂಗಪ್ಪ ಸೊನ್ನದ (ದ್ಯಾವಾಪುರ) (65) ಮೃತ ರೈತ. ಇವರು ಶನಿವಾರ ಹಳ್ಳದ ಬಳಿ ಸಂಜೆ ತಮ್ಮ ಮೂರು ಎಮ್ಮೆಗಳನ್ನು ಮೇಯಿಸಿಕೊಂಡು ಹೋದಾಗ ಒಂದು ಎಮ್ಮೆ ಹಳ್ಳದ ಹರಿವಿಗೆ ಸಿಲುಕಿತ್ತು.

ತೀವ್ರ ಮಳೆ ಮತ್ತು ರೋಣಿಹಾಳ ಹಾಗೂ ಗರಸಂಗಿ ಹಳ್ಳಗಳಿಂದ ಹೆಚ್ಚಿನ ನೀರಿನ ಹರಿವಿದ್ದ ಕಾರಣ ಎರಡೂ ಹಳ್ಳಗಳು ಕೂಡುವ ಈ ಮುಖ್ಯ ಹಳ್ಳದಲ್ಲಿ ನೀರಿನ ರಭಸ ತೀವ್ರವಾಗಿತ್ತು. ಹರಿವಿನಲ್ಲಿ ಸಿಲುಕಿ ಹರಿದುಕೊಂಡು ಹೋಗುತ್ತಿದ್ದ ಎಮ್ಮೆಯನ್ನು ರಕ್ಷಿಸಲು ಹೋಗಿ ರೈತ ತಾನೂ ಕೂಡ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ರಾತ್ರಿಯಾದರೂ ಮರಳದ ಕಾರಣ ತಡರಾತ್ರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಪೊಲೀಸರು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದಾಗ ಹಳ್ಳದ ದೂರದ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್​ ಪಿ. ಜಿ ಪವಾರ ಹಾಗೂ ಪಿಎಸ್ಐಗಳಾದ ಪ್ರೀಯತಮ್ ನಾಯಕ್ ಮತ್ತು ಆರ್. ಎನ್ ಬಿರಾದಾರ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಾ ನದಿಗೆ ಹಾರಿ ಯುವಕ ಆತ್ಮಹತ್ಯೆ : ಆಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ವ್ಯಾಪ್ತಿಯಲ್ಲಿ ನಡೆದಿದೆ. ಸುನೀಲ್​ ಚವ್ಹಾಣ(25) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ತಿಳಿದುಬಂದಿದೆ.

ನಿಡಗುಂದಿ ತಾಲೂಕಿನ ಸೀತಿಮನಿ ತಾಂಡಾ ನಿವಾಸಿಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನದಿಗೆ ಹಾರಿದ್ದ ಯುವಕನ ಶವವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಓದಿ:ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಗಾಸಿಪ್​: ಕೆ. ಪಿ ನಂಜುಂಡಿ

ABOUT THE AUTHOR

...view details