ಕರ್ನಾಟಕ

karnataka

ETV Bharat / state

ಐತಿಹಾಸಿಕ ವಿಜಯಪುರದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಿ- ಲೋಕಾಯುಕ್ತ ಬಿ.ಎಸ್.ಪಾಟೀಲ

ಐತಿಹಾಸಿಕ ಸ್ಮಾರಕಗಳ ಬೀಡು ವಿಜಯಪುರ - ವಿದೇಶಿ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ - ವಿಜಯಪುರದಲ್ಲಿ ಮರೆಯಾದ ಸ್ವಚ್ಛತೆ- ಲೋಕಾಯುಕ್ತ ಬಿ.ಎಸ್. ಪಾಟೀಲ ಗರಂ

A district level progress review meeting was held at Vijayapura
ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು

By

Published : Jan 28, 2023, 10:42 AM IST

Updated : Jan 28, 2023, 12:14 PM IST

ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ವಿಜಯಪುರ:ಸಹಸ್ರಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಸದಾಶಯದಂತೆ ಒಳಗೂ ಹಾಗೂ ಹೊರಗು ಸ್ವಚ್ಛತೆ ಎಂಬಂತೆ ವಿಜಯಪುರ ನಗರ ಸ್ವಚ್ಛತೆಯ ಕೇಂದ್ರ ಬಿಂದುವಾಗಬೇಕು. ಪ್ರತಿ 15 ದಿನಗಳಿಗೊಮ್ಮೆ ಈ ವಿಷಯವಾಗಿ ಪರಿವೀಕ್ಷಣೆ ಮಾಡುವಂತೆ ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರದಲ್ಲೇ ಬದಲಾವಣೆಯಾಬೇಕು ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಐತಿಹಾಸಿಕ ಸ್ಮಾರಕಗಳ ನೆಲೆವಿದು. ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ. ಆದರೆ, ಸ್ವಚ್ಛತೆಯೇ ಮರೀಚಿಕೆಯಾಗಿದೆ ಎಂದರೆ ಜಿಲ್ಲೆಯ ಮರ್ಯಾದೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಪಾಲಿಕೆ ಅಧಿಕಾರಿಗಳಿಗಾದರೂ ಸ್ವಚ್ಛತೆಗೆ ಅವಕಾಶ ಕೊಡಿ ಇಲ್ಲವಾದರೆ ನೀವೇ ಸ್ವಚ್ಛತಾ ಕಾರ್ಯ ಮಾಡಿ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಅಧಿಕಾರಿಗಳಿಗೆ 15 ದಿನಗಳ ಗಡುವು:''ಐತಿಹಾಸಿಕ ಹಿನ್ನೆಲೆ ಹೊಂದಿರುವ ಊರು ವಿಜಯಪುರ. ನಮ್ಮ ಊರು ಸುಂದರವಾಗಿಡೋಣ ಎಂಬ ಒಂದೇ ಒಂದು ಫಲಕಗಳು ನನಗೆ ಕಾಣಲಿಲ್ಲ. ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಪ್ರೇರೇಪಿಸಬೇಕು. ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಸ್ವಚ್ಛತೆಗೆ ಶ್ರಮಿಸಬೇಕಿದೆ. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಊರಲ್ಲೆಲ್ಲ ಸ್ವಚ್ಛಗೊಳಿಸುತ್ತಿದ್ದೆವು. ಎಲ್ಲ ಮಕ್ಕಳು, ಸಂಘ, ಸಂಸ್ಥೆಗಳನ್ನು ಬಳಸಿಕೊಂಡು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕೊಳಚೆ ನೀರು ಎಲ್ಲಿಯೂ ಸಂಗ್ರಹಣೆಯಾಗದಂತೆ ಕ್ರಮ ವಹಿಸಬೇಕು.

ಖಾಸಗಿ ನಿವೇಶನ ಹಾಗೂ ಲೇಔಟ್​ಗಳಲ್ಲಿ ಮುಳ್ಳಿನ ಗಿಡಗಳು ಬೆಳೆಯದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಮುಳ್ಳಿನ ಗಿಡಗಳು ಬೆಳೆದರೆ ಸಾಂಕ್ರಾಮಿಕ ರೋಗಗಳ ಉಲ್ಭಣಕ್ಕೆ ದಾರಿಯಾಗುತ್ತದೆ. ಎಲ್ಲಿಯೂ ತ್ಯಾಜ್ಯ ರಾರಾಜಿಸದಂತೆ ನೋಡಿಕೊಳ್ಳಬೇಕು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. 15 ದಿನಗಳಲ್ಲಿ ವಿಜಯಪುರ ನಗರ ಸ್ವಚ್ಛತೆ ವಿಚಾರದಲ್ಲಿ ಬದಲಾವಣೆಯಾಗಬೇಕು. ಬದಲಾವಣೆ ತರುವುದೇ ನನ್ನ ಬದ್ಧತೆ'' ಎಂದರು.

ನಾಗರಿಕರು ದೂರು ದಾಖಲಿಸಲು ಸಲಹೆ:''ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಅಧಿಕಾರ ಕರ್ನಾಟಕ ಲೋಕಾಯುಕ್ತಕ್ಕೆ ಇದೆ. ದೂರು ದಾಖಲಿಸಿಕೊಂಡು ಅಧಿಕಾರಿಗಳಿಗೆ ವಿವರಣೆ ಕೇಳುವ ಅಧಿಕಾರ ಹಾಗೂ ಜವಾಬ್ದಾರಿ ಲೋಕಾಯುಕ್ತಕ್ಕೆ ಇದೆ. ಉದಾಹರಣೆಗೆ ಭೂಮಿ ಸ್ವರೂಪ ಬದಲಾವಣೆಗೆ ಸಂಬಂಧಿಸಿದಂತೆ ಸರ್ವರ್ ಸಮಸ್ಯೆಯಾಗುತ್ತದೆ. ಕ್ಲಾಕ್ ಬಂದಿಲ್ಲ ಎಂಬ ನೆಪ ನೀಡಿ, ಜವಾಬ್ದಾರಿ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿದರೆ, ಅದು ನಾಗರಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ರೀತಿಯ ಪ್ರಕರಣದಲ್ಲಿ ನಾಗರಿಕರು ವೈಯುಕ್ತಿಕವಾಗಿಯೂ ದೂರು ದಾಖಲಿಸುವ ಅವಕಾಶವಿದೆ'' ಎಂದು ಅರ್ಥೈಸಿದರು.

ಅತಿ ಭ್ರಷ್ಟ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ:''ವಿಜಯಪುರ ಜಿಲ್ಲೆಯಲ್ಲಿರುವ ಅತೀ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಎಂದು ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅತೀ ಭ್ರಷ್ಟರು ಎಂದು ಅನಿಸುವ ಅಧಿಕಾರಿಗಳ ಅವರ ಆಸ್ತಿ ವಿವರವನ್ನು ಕಲೆ ಹಾಕಬೇಕು. ಅವರು ಬೆಂಗಳೂರಿನಲ್ಲಿ ಎಷ್ಟು ಸೈಟ್​ಗಳನ್ನು ಮಾಡಿದ್ದಾರೆ? ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿದ್ದಾರೆ? ವಿಜಯಪುರದಲ್ಲಿ ಎಷ್ಟು ಸೈಟ್ ಮಾಡಿದ್ದಾರೆ ಎಂಬ ಮಾಹಿತಿ ಕಲೆಹಾಕುವ ಜೊತೆಗೆ ಅವರ ಪೂರ್ವಾಪರ ಸಂಗ್ರಹಿಸಲು ಸೂಚಿಸಲಾಗಿದೆ. ಆರ್ಥಿಕ ದುರ್ಬಲ ವರ್ಗದ ಅಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅನೇಕ ಅಧಿಕಾರಿಗಳು ಇಂದು ಕುಬೇರರಾಗಿದ್ದಾರೆ, ಈ ದುಡ್ಡು ಎಲ್ಲಿಂದ ಬಂತು'' ಎಂದು ಪ್ರಶ್ನಿಸಿದರು.

''ವಿನಾಕಾರಣ ನಾವು ಅಧಿಕಾರಿಗಳಿಗೆ ತೊಂದರೆ ನೀಡುವುದಿಲ್ಲ. ದುರದ್ದೇಶ ಪೂರ್ವಕವಾಗಿ ಬಂದ ಆರೋಪಗಳನ್ನು 10 ಸಾರಿ ವಿಚಾರಿಸಿಯೇ ಮುಂದಿನ ಪ್ರಕ್ರಿಯೆಗೆ ಕೈಗೊಳ್ಳುತ್ತೇವೆ. ಲೋಕಾಯುಕ್ತದ ಬಗ್ಗೆ ಅಧಿಕಾರಿಗಳಲ್ಲಿ ಭಯಬೇಡ. ದುರುದ್ದೇಶಪೂರ್ವಕವಾಗಿ, ದುರಾಸೆಯಿಂದಾಗಿ ಸರ್ಕಾರಿ ಹಣ ಲೂಟಿ ಮಾಡುವವರನ್ನು ಬೇಟೆ ಮಾಡುವ ಸಮಯ ಬಂದಿದೆ'' ಎಂದು ಹೇಳಿದರು.

ಯುದ್ಧೋಪಾದಿಯಲ್ಲಿ ಶೌಚಾಲಯ ನಿರ್ಮಿಸಿ: ''ಯುದ್ಧೋಪಾದಿಯಲ್ಲಿ ಶೌಚಾಲಯ ನಿರ್ಮಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ಚಂಬು ಹಿಡಿದು ಹೊರಗೆ ಹೋಗುವವರೇ ಹೆಚ್ಚು. ಕಾರು, ಬೈಕ್ ಹೊಂದಿದವರು ಸಹ ಶೌಚಾಲಯ ನಿರ್ಮಾಣಕ್ಕೆ ಅಸಡ್ಡೆ ತೋರುತ್ತಿದ್ದಾರೆ. ಅತ್ಯಂತ ವೇಗವಾಗಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣವಾಗಬೇಕು. ಬರೀ ಶೌಚಾಲಯ ಕಟ್ಟಿದರೆ ಸಾಲದು ಅದಕ್ಕೆ ಪೂರಕವಾದ ಇಂಗುಗುಂಡಿ, ನೀರಿನ ಸೌಲಭ್ಯ ಒದಗಿಸಬೇಕು. ದೊಡ್ಡ ಕುಟುಂಬಗಳಿಗೆ ಸಮುದಾಯ ಶೌಚಾಲಯದಲ್ಲಿಯೇ ಒಂದು ಪ್ರತ್ಯೇಕವಾದ ಶೌಚಾಲಯವನ್ನು ಅವರ ಸುಪರ್ದಿಗೆ ನೀಡಬೇಕು. ಅದನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆಯನ್ನು ಆಯಾ ಕುಟುಂಬಕ್ಕೆ ಒದಗಿಸಬೇಕು'' ಎಂದು ಸಲಹೆ ನೀಡಿದರು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ''ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕರ ಸಹಕಾರ ಪಡೆದುಕೊಂಡು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೌಚಾಲಯಗಳ ನಿರ್ಮಿಸುವ ಕಾರ್ಯ ಪೂರ್ಣಗೊಳಿಸಬೇಕು. ವಿನಾಕಾರಣ ಜನರ ಬಳಿ ಜಗಳ ಮಾಡಲು ಹೋಗಬೇಡಿ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ಕಾರ್ಯ ಅನುಷ್ಠಾನಗೊಳಿಸಬೇಕು ಎಂದು ಸೂಚಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ರಾಹುಲ್ ಶಿಂಧೆ ಅವರು, ಜಿಲ್ಲೆಯಲ್ಲಿ 3,00,803 ಕುಟುಂಬಗಳ ಪೈಕಿ 2,89,394 ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿವೆ. ಶೇ.96.11 ರಷ್ಟು ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲಾಗಿದೆ. 11,409 ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ'' ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ, ಎಸ್ಪಿ ಎಚ್.ಡಿ.ಆನಂದಕುಮಾರ, ಸಿಇಓ ರಾಹುಲ್ ಶಿಂಧೆ, ಲೋಕಾಯುಕ್ತ ಎಸ್ಪಿ ಅನೀತಾ ಹದ್ದಣ್ಣವರ, ಎಡಿಸಿ ರಮೇಶ ಕಳಸದ ಸಭೆಯಲ್ಲಿ ಇದ್ದರು.

ಇದನ್ನೂ ಓದಿ:ಸಮುದಾಯದ ಬೇಡಿಕೆಗಾಗಿ ನಿರಂತರ ಪಾದಯಾತ್ರೆ; ಪ್ರಣವಾನಂದ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು

Last Updated : Jan 28, 2023, 12:14 PM IST

ABOUT THE AUTHOR

...view details