ವಿಜಯಪುರ: ಬದುಕಿರುವಾಗಲೇ ವೃದ್ಧೆಯೊಬ್ಬರಿಗೆ ಮರಣ ಪ್ರಮಾಣಪತ್ರ ನೀಡಿದ ವಿಚಿತ್ರ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದರ ಹಿಂದೆ ಸಂಬಂಧಿಕರ ಆಸ್ತಿ ಹೊಡೆಯುವ ದುರಾಲೋಚನೆ ಇತ್ತಾ? ಅಥವಾ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೇ ಇನ್ನುವ ಪ್ರಶ್ನೆ ಎದುರಾಗಿದೆ.
ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳೆ ಎಂಬುವರಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿ ಅಚ್ಚರಿ ಮೂಡಿಸಿದ್ದಾರೆ. ವೃದ್ಧೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪ್ರಮಾಣಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001 ರಲ್ಲಿ ನಿಧನರಾಗಿದ್ದೀರಿ ಎಂದು ಅವರ ಮರಣ ಪತ್ರವನ್ನೇ ನೀಡಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಸಾವಿತ್ರಿ ಮೂಲತಃ ಹೊನ್ನಳ್ಳಿ ಗ್ರಾಮದವರು. ಇವರು ತಂದೆಗೆ ಒಬ್ಬಳೇ ಮಗಳಾಗಿದ್ದು, ಅಪ್ಪ ನಿಧನರಾದ ನಂತರ ಅವರ 12 ಎಕರೆ ಹೊಲ ಇವರ ಹೆಸರಿಗೆ ಬಂದಿತ್ತು. ಈ ಆಸ್ತಿ ಲಪಟಾಯಿಸಲು ತಮ್ಮ ಸಂಬಂಧಿಕರೊಬ್ಬರು ದತ್ತು ಪುತ್ರನೆಂದು ಬಿಂಬಿಸಿ ತನ್ನ ಆಸ್ತಿ ಕಬಳಿಸಲು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾರೆ.
ಮರಣ ಪತ್ರದ ರಹಸ್ಯವೇನು?: ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳೆ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವಿದ್ಯಾವಂತರು, ಪ್ರಪಂಚದ ಜ್ಞಾನ ಸಹ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅವರ ಸಂಬಂಧಿಕರೊಬ್ಬರು ಸಾವಿತ್ರಿ ಹೆಸರಿನಲ್ಲಿರುವ 12 ಎಕರೆ ಜಮೀನು ಹೊಡೆಯಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 11-03-2001ರಂದು ನಿಧನರಾಗಿದ್ದಾರೆಂದು ಚಡಚಣದ ಗ್ರಾಮ ಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೋಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೋಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಈ ವಿಚಾರ ಗೊತ್ತಿಲ್ಲದ ವೃದ್ಧೆ ಸಾವಿತ್ರಿ ತಮ್ಮ ತಾಯಿಯ ಮರಣ ಪ್ರಮಾಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪ್ರಮಾಣ ಪತ್ರ ನೀಡಿದ ಮೇಲೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.