ಮುದ್ದೇಬಿಹಾಳ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಲಾಕ್ ಆಗಿರುವುದರಿಂದ ಪಾಲಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳು ಪಾಲಕರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲಾ ಶುಲ್ಕ ಭರಿಸುವಂತೆ ಒತ್ತಡ ಹೇರುತ್ತಿವೆ. ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಆದೇಶ ಹೊರಡಿಸಿ ಸರ್ಕಾರ ನಿಗದಿಪಡಿಸುವ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಯವರು ಪಡೆದುಕೊಳ್ಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಡೊನೇಷನ್ ಹಾವಳಿ ತಡೆಯಲು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ - CM BSY reaction
ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಆದೇಶ ಹೊರಡಿಸಿ ಸರ್ಕಾರ ನಿಗದಿಪಡಿಸುವ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಯವರು ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಡೊನೇಷನ್ ಹಾವಳಿ ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಖಾಸಗಿ ಶಾಲಾ-ಕಾಲೇಜುಗಳು ಟ್ರಸ್ಟ್ ಹೆಸರಿನಲ್ಲಿ ಅನೇಕ ವಿನಾಯಿತಿಗಳನ್ನು ಸರ್ಕಾರದಿಂದ ಪಡೆಯುತ್ತಿವೆ. ಕೊರೊನಾ ಇರುವುದರಿಂದ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡಿದಲ್ಲಿ ಲಕ್ಷಾಂತರ ಬಡವರಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ಅಲ್ಲದೇ ಖಾಸಗಿ ಶಾಲಾ-ಕಾಲೇಜುಗಳು ಸಹ ಸಾಮಾಜಿಕ ಜವಾಬ್ದಾರಿ ಮೆರೆದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರತಿ ವರ್ಷ ಡೊನೇಷನ್ ಹಾವಳಿ ನಿರಂತರವಾಗಿದ್ದು, ಈ ವರ್ಷವೂ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಹೆಚ್ಚಿನ ಡೊನೇಷನ್ ನೀಡುವಂತೆ ಪಾಲಕರಿಗೆ ಕರೆಗಳು/ಸಂದೇಶಗಳು ಬರುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರಿ ಶುಲ್ಕ ಪಡೆಯುವಂತೆ ನಿರ್ದೇಶನ ನೀಡಲು ಮುಂದಾಗಬೇಕು. ಖಾಸಗಿ ಶಾಲಾ-ಕಾಲೇಜುಗಳು ಪಾಲಕರಿಗೆ ಕಿರುಕುಳ ಮುಂದುವರೆಸಿದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಮಗೆ ಈ ಮೂಲಕ ತಿಳಿಸುತ್ತೇವೆ. ಇದಕ್ಕೆ ಆಸ್ಪದ ನೀಡದೇ ಸಂಬಧಪಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಶುಲ್ಕ ಮಾತ್ರ ಪಾಲಕರಿಂದ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.