ವಿಜಯಪುರ:ದಕ್ಷಿಣ ಕರ್ನಾಟಕದ ಸಿರಿ ಚೆಂದ್, ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಊಟದ ಸವಿ ಚೆಂದ್ ಎನ್ನುವ ನಾಣ್ಣುಡಿ ಜನಪ್ರಿಯ. ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮದ ಹೆಬ್ಬಾಗಿಲು ಎನ್ನುವ ವಿಜಯಪುರದ ಗೋಳಗುಮ್ಮಟ ನೋಡಲು ಬರುವ ಪ್ರವಾಸಿಗರು ಮೊದಲು ಹುಡುಕುವುದೇ ಖಾನಾವಳಿ (ಹೋಟೆಲ್). ಇಲ್ಲಿ ಸಿಗುವ ನಾನಾ ರುಚಿಕರ ಖಾದ್ಯಗಳನ್ನು ಸವಿದು ಮತ್ತೊಮ್ಮೆ ಸ್ನೇಹಿತರ ಜತೆ ವಿಜಯಪುರಕ್ಕೆ ಬರಲು ಪ್ಲ್ಯಾನ್ ಹಾಕಿಕೊಳ್ತಾರೆ.
ಉ.ಕರ್ನಾಟಕದಲ್ಲಿ ವಿಜಯಪುರದ ಐತಿಹಾಸಿಕ ಗುಮ್ಮಟನಗರಿ ಜನಾಕರ್ಷಣೆಯ ಕೇಂದ್ರಬಿಂದು. ಇದಕ್ಕೆ ಮೆರುಗು ನೀಡುವುದೇ ಖಡಕ್ ಜೋಳದ ರೊಟ್ಟಿ ಊಟ. ಜಿಲ್ಲೆಗೆ ಆಗಮಿಸುವ ಪ್ರತಿ ಪ್ರವಾಸಿಗನೂ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸೇರಿ ವಿವಿಧ ಸ್ಥಳಗಳನ್ನು ನೋಡುವುದರ ಜತೆಗೆ ಖಡಕ್ ರೊಟ್ಟಿ ಊಟ ಮಿಸ್ ಮಾಡಲಾರ. ಅಷ್ಟು ರುಚಿಕಟ್ಟು ಮತ್ತು ಆರೋಗ್ಯಕರ ಊಟ ಉತ್ತರ ಕರ್ನಾಟಕದ್ದು ಎಂದರೆ ಉತ್ಪ್ರೇಕ್ಷೆಯಲ್ಲ. ಪ್ರವಾಸಿಗರ ಕಣ್ಣು ತಣಿಸಲು ಗೋಳಗುಮ್ಮಟವಿದ್ದರೆ ಹೊಟ್ಟೆ ತುಂಬಿಸಲು ಬಸವೇಶ್ವರ, ಎಡೆಯೂರ ಸಿದ್ದಲಿಂಗೇಶ್ವರ ಖಾನಾವಳಿಗಳು ಇಲ್ಲಿನ ಗಲ್ಲಿ ಗಲ್ಲಿಯಲ್ಲಿವೆ.
ಖಾನಾವಳಿ ಮಾಲೀಕರು ಸಹ ಪ್ರವಾಸಿಗರ ಬಯಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸುವ ಜೋಳದ ರೊಟ್ಟಿ, ಎಣ್ಣಿಕಾಯಿ ಬದನೆಕಾಯಿ, ಜೂಳಕದ ವಡೆ ಹಾಗು ವಿವಿಧ ರೀತಿಯ ಕಾಳು ಪಲ್ಯ, ಉಳ್ಳಾಗಡ್ಡಿ, ಮೆಂತೆಕಾಯಿ ಪಲ್ಯ, ನಾನಾ ರೀತಿಯ ಉಪ್ಪಿನಕಾಯಿ, ಕಾರಬೇಳೆ ಸಾರು, ಶೇಂಗಾ, ಕಾರಳ್ಳು, ಪುಟಾಣಿ, ಹತ್ತು ಹಲವು ಚಟ್ನಿಯ ಜತೆ ಪಾಪಡ್ ಚಪಾತಿ ಬಡಿಸಿದರೆ ಪ್ರವಾಸಿಗರಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಅನುಭವ ಸಿಗುತ್ತದೆ. ಸ್ಮಾರಕ ವೀಕ್ಷಿಸಿದ ನಂತರ ಸುಸ್ತಾದವರಿಗೆ ಹೊಟ್ಟೆ ತುಂಬಿಸಲು ಭಕ್ಷ್ಯ ಭೋಜನ ನೀಡಿ ಅವರನ್ನು ಸಂತೃಪ್ತಿಗೊಳಿಸುವುದರೊಂದಿಗೆ ತಮ್ಮ ವ್ಯಾಪಾರವನ್ನೂ ವೃದ್ಧಿಸಿಕೊಳ್ಳುತ್ತಾರೆ.
ವಿಜಯಪುರ ಪ್ರವಾಸ ಮುಗಿಸಿ ಮುಂದೆ ಸಾಗುವ ಪ್ರವಾಸಿಗರು ಆಲಮಟ್ಟಿ, ಕೂಡಲಸಂಗಮಕ್ಕೆ ಹೋಗಿ ತಂಗುವರು. ಅಲ್ಲಿಯೂ ಇದೇ ರೀತಿಯ ಭಕ್ಷ್ಯ ಭೋಜನ ಸಿಗುತ್ತದೆ. ವಿವಿಧ ಚಟ್ನಿಗಳಿಗೆ ಗಟ್ಟಿ ಮೊಸರು, ಮಜ್ಜಿಗೆ ಸವಿದವರು ತಮ್ಮ ಜೀವಿತಾವಧಿವರೆಗೂ ನೆನಪಿಟ್ಟುಕೊಳ್ಳುತ್ತಾರೆ. ಮತ್ತೇಕೆ ತಡ? ನೀವೂ ಒಮ್ಮೆ ಖಡಕ್ ರೊಟ್ಟಿ ಊಟಕ್ಕೆ ಬನ್ನಿ!.
ಇದನ್ನೂ ಓದಿ:ಭೂಮಿ ಮೇಲಿನ ಸ್ವರ್ಗದಂತಿದೆ ಕೊಡಗಿನ ಈ ಪ್ರವಾಸಿ ತಾಣ.. ನೀವು ಒಮ್ಮೆ ಭೇಟಿ ನೀಡಿ