ವಿಜಯಪುರ: ನನ್ನ ಹಾಗೂ ನನ್ನ ಕುಟುಂಬದ ಮತ್ತು ಆಪ್ತ ಸಹಾಯಕರ ಫೋನ್ ಕಾಲ್ ಡಿಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ಪೊಲೀಸ್ ಇಲಾಖೆಗೆ ದೂರು ಸಲ್ಲಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಎಂಬಿಪಿ ಫೋನ್ ಟ್ಯಾಪ್ ಆಗಿಲ್ಲ, ಅದು ಫೋನ್ ಸಿಡಿಆರ್ ಆಗಿದೆ. ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಸಿಡಿಆರ್ ತೆಗೆಯುವ ಚಾಳಿ ಇದೆ. ಆದರೆ ಯಾರ ಹೆಸರು ಹೇಳೋದಿಲ್ಲ, ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಆದರೆ ಸರ್ಕಾರ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ. ಫೋನ್ ಸಿಡಿಆರ್ ನನ್ನ ವಿರೋಧಿಗಳು ಮಾಡುತ್ತಿದ್ದಾರೆ. ಇದರಲ್ಲಿ ಅನುಮಾನ ಇಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ: ಮಾಜಿ ಸಿಎಂ ಸಿದ್ದರಾಮಯ್ಯ ಮತಕ್ಷೇತ್ರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಏನು ಚರ್ಚೆ ಆಗಿದೆ ನನಗೆ ಗೊತ್ತಿಲ್ಲಾ. ವರುಣಾದಿಂದ ಸ್ಪರ್ಧೆ ಮಾಡಿದರೆ ವ್ಯಾಪಕ ಪ್ರಚಾರ ಮಾಡಲು ಆಗಬಹುದೆಂದು ರಾಹುಲ್ ಗಾಂಧಿ ಹೇಳಿರಬಹುದು. ಕೋಲಾರದಿಂದ ಸ್ಪರ್ಧೆ ಮಾಡಿದರೆ ಅದು ಹೊಸ ಕ್ಷೇತ್ರವಾಗಿದೆ. ಜಾಸ್ತಿ ಸಮಯ ನೀಡಬೇಕಾಗುತ್ತದೆ ಎಂದಿರಬಹುದು ಎಂದರು.
ಸಿದ್ದರಾಮಯ್ಯ 50 ಸಾವಿರ ಮತ ಅಂತರದಲ್ಲಿ ಗೆಲ್ತಾರೆ: ಸಿದ್ದರಾಮಯ್ಯ ಬಾದಾಮಿ, ಕೋಲಾರ, ವರುಣಾ ಎಲ್ಲೇ ನಿಂತರು, 40 - 50 ಸಾವಿರ ಮತಗಳ ಅಂತರಿ ಗೆಲುತ್ತಾರೆ. ಸಿದ್ದರಾಮಯ್ಯ ಬರುವುದರಿಂದ ಪ್ರತಿ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲ್ಲುತ್ತಾರೆ.
ನಮ್ಮ ಪಕ್ಷದ ನೂರಾರು ಶಾಸಕರು ಆಯ್ಕೆಯಾಗುತ್ತಾರೆ. ಅವರಲ್ಲಿ ಅಂತಹ ಶಕ್ತಿ ಇದೆ. ನನ್ನದೇ ಮತಕಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರ ಮಾಡಿದರೆ 10 ಸಾವಿರ ಮತಗಳು ಹೆಚ್ಚು ಬರುತ್ತವೆ. ಅವರನ್ನು ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಬೇಕೆಂದು ರಾಹುಲ್ ಗಾಂಧಿ ಹೇಳಿರಬಹುದು ಪತ್ರಕರ್ತರಿಗೆ ಸಮುಜಾಯಿಷಿ ಉತ್ತರ ನೀಡಿದರು.
ಯುಗಾದಿ ಹಬ್ಬದ ದಿನ ಕೈ ಪಟ್ಟಿ ರಿಲೀಸ್ :ಯುಗಾದಿ ದಿನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುತ್ತದೆ. ಯುಗಾದಿಗೆ ಸಿಹಿ ಸುದ್ದಿ ನೀಡುತ್ತೇವೆಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದ ಅವರು, ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ರಾಹುಲ್ ಗಾಂಧಿ ಮಾ. 20(ಸೋಮವಾರ)ರಂದು 11 ಗಂಟೆಗೆ ಬೆಳಗಾವಿಗೆ ಬರುತ್ತಿದ್ದಾರೆ. ಬೃಹತ್ ಯುವಕರ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.